Header Ads
Breaking News

‘ವನರಂಗ’ದಲ್ಲಿ ಕಲಾತ್ಮಕ ವೈವಿಧ್ಯತೆಯ ಅನಾವರಣ

ಎಸ್.ಡಿ.ಎಂ.ನ ವನರಂಗ ವೇದಿಕೆಯಲ್ಲಿ ಕೇಂದ್ರ ಸರ್ಕಾರದ ಸಾಂಸ್ಕೃತಿಕ ಸಚಿವಾಲಯ ಅಧೀನದ ತಂಜಾವೂರಿನ ದಕ್ಷಿಣ ವಲಯ ಸಂಸ್ಕೃತಿ ಕೇಂದ್ರದ ಸಹಯೋಗದೊಂದಿಗೆ ಬುಧವಾರ ಆಯೋಜಿತವಾಗಿದ್ದ ಭಾರತೀಯ ಲೋಕ ಉತ್ಸವ ಧರ್ಮಸ್ಥಳ-2020 ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನದಂದು ಭಾರತದ ಕಲಾತ್ಮಕ ವೈವಿಧ್ಯತೆ ಅನಾವರಣಗೊಂಡಿತು.
ದೇಶದ ಏಳು ರಾಜ್ಯಗಳ ಕಲಾತಂಡಗಳು ಶಾಸ್ತ್ರೀಯ ಮತ್ತು ಜನಪದೀಯ ಶೈಲಿಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಜನಮನ ಸೆಳೆದವು. ಗಾಯನ, ನೃತ್ಯ ಮತ್ತು ವಾದ್ಯ ಸಂಗೀತದ ರಂಜನೆಯನ್ನು ನೀಡಿದವು. ವಿಶೇಷವಾಗಿ ತಂಜಾವೂರಿನ ಟೌರ್ಯತ್ರಿಕಂ ತಂಡದ ಪ್ರದರ್ಶನವು ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು.

ಕೇರಳ ಮೂಲದ ಟೌರ್ಯತ್ರಿಕಂ ತಂಡವು ಸಂಗೀತ ಹಾಗೂ ಮೋಹಿನಿಯಾಟಂ, ಭರತನಾಟ್ಯಂ ಮತ್ತು ಕಥಕ್ಕಳಿ ನೃತ್ಯ ಶೈಲಿಗಳ ಜೊತೆಗೆ ಕೊಳಲು, ತಾಳ, ಚಂಡೆ, ವೈಲಿನ್, ತಬಲ ಇಂಥ ಸಂಗೀತ ವಾದ್ಯಗಳ ಜುಗಲ್ಬಂದಿಯನ್ನು ಪ್ರದರ್ಶಿಸಿದ್ದು ನೋಡುಗರ ಮನಸೆಳೆಯಿತು.

ವಿವಿಧ ರಾಜ್ಯಗಳ ಜನಪದ ನೃತ್ಯ ಶೈಲಿಗಳು ಕಾರ್ಯಕ್ರಮದ ರಂಗನ್ನು ಮತ್ತಷ್ಟು ಹೆಚ್ಚಿಸಿದವು. ತಮಿಳುನಾಡಿನ ಜನಪದ ನೃತ್ಯ ಕಲೆಯಾದ ಸಿಲಾಂಬಟ್ಟಂ ಮತ್ತು ತಪ್ಪಟ್ಟಂ ತಮಿಳ್ನಾಡಿನ ಸಮರ ಕಲೆ ಆಧರಿಸಿದ ನೃತ್ಯ ಪ್ರಕಾರವಾಗಿದ್ದು ಈ ಶೈಲಿಯನ್ನು ಪ್ರದರ್ಶಿಸಿದ ತಂಡದ ಥಪ್ಪು ವಾದ್ಯ, ಕತ್ತಿ ಹಾಗೂ ಬೆಂಕಿಯನ್ನು ಬಳಸಿ ಸಾಹಸಕರ ಪ್ರದರ್ಶನವನ್ನು ನೀಡಿ ನೆರೆದಿದ್ದವರನ್ನು ರಂಜಿಸಿದರು.
ಮಣಿಪುರದ ಟಂಗ್- ಟ ಮತ್ತು ಸ್ಟಿಕ್ ಡಾನ್ಸ್ ನೃತ್ಯ ಪ್ರಕಾರಗಳು ಮಣಿಪುರದ ಪ್ರಾಚೀನ ಹಾಗೂ ಗಮನಾರ್ಹ ಶಸ್ತ್ರ ಕಲೆಯನ್ನು ಬಿಂಬಿಸಿದವು. ಅದರಲ್ಲಿ ಹೆಣ್ಣುಮಕ್ಕಳ ಕತ್ತಿವರಸೆ, ಹುಡುಗರ ಸ್ಟಿಕ್ ಡಾನ್ಸ್ ನ ವಿವಿಧ ಭಂಗಿಗಳ ಪ್ರದರ್ಶನ ಹಾಗೂ ಕಣ್ಣಿಗೆ ಬಟ್ಟೆ ಕಟ್ಟಿ, ಶಸ್ತ್ರ ಕಲೆಯನ್ನು ಪ್ರದರ್ಶಿಸಿದ್ದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿತು.

ಜಮ್ಮು-ಕಾಶ್ಮೀರದ ರೌಫ್ ಡಾನ್ಸ್, ಅಸ್ಸಾಂನ ಬಿಹು ನೃತ್ಯ, ಗುಜರಾತಿನ ದಂಗಿ ನೃತ್ಯ ಮತ್ತು ಮಹಾರಾಷ್ಟ್ರದ ಗೊಂಡಾಲಿ ನೃತ್ಯ ಪ್ರಕಾರಗಳು ಪ್ರತ್ಯೇಕವಾಗಿ ದೇವರಿಗೆ ಅರ್ಪಣೆ ಎಂಬಂತೆ ವಿವಿಧ ಹಬ್ಬ ಹರಿದಿನಗಳಂದು ಪ್ರದರ್ಶಿಸಲ್ಪಡುತ್ತವೆ. ಈ ಎಲ್ಲಾ ನೃತ್ಯಗಳು ತಮ್ಮ ವಿಭಿನ್ನತೆಯ ಮೂಲಕ ನೋಡುಗರ ಗಮನಸೆಳೆದವು.

ಮುಖ್ಯ ಪ್ರದರ್ಶನ ನೀಡಿದ ಕೇರಳದ ಟೌರ್ಯತ್ರಿಕಂ ತಂಡಕ್ಕೆ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ .ಎಸ್ ಗಾಯಕರನ್ನು ಸನ್ಮಾನಿಸಿದರು. ಉಳಿದ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಸಂಸ್ಥೆಯ ಹಲವು ಗಣ್ಯರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಸುವೀರ್ ಜೈನ್ ಮತ್ತು ಡಾ. ಮಹೇಶ್ ಕುಮಾರ್ ಶೆಟ್ಟಿ ನಿರೂಪಿಸಿದರು.
ವರದಿ: ಚಂದನ ಎಸ್
ಚಿತ್ರ: ಅಖಿಲೇಶ್

Related posts

Leave a Reply

Your email address will not be published. Required fields are marked *