Header Ads
Header Ads
Breaking News

ವರುಣನ ಅಬ್ಬರಕ್ಕೆ ವಿಟ್ಲ ಭಾಗದಲ್ಲಿ ರಸ್ತೆಗಳು ಜಲಾವೃತ. ಕೆಲವೆಡೆ ಗುಡ್ಡ ಕುಸಿತ, ರಸ್ತೆಗುರುಳಿದ ಮರಗಳು.

ವರುಣನ ಅಬ್ಬರಕ್ಕೆ ವಿಟ್ಲ ಭಾಗದಲ್ಲಿ ರಸ್ತೆಗಳು ಜಲವೃತಗೊಂಡಿದೆ. ಗುಡ್ಡಗಳು ಕುಸಿದು, ರಸ್ತೆಗೆ ಮರಗಳು ಬಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.ವಿಟ್ಲ ಭಾಗದಲ್ಲಿ ಶುಕ್ರವಾರ ಮಧ್ಯೆರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ವಿಟ್ಲ-ಸಾಲೆತ್ತೂರು-ಮಂಗಳೂರು ರಸ್ತೆಯ ಕುಡ್ತಮುಗೇರು ಎಂಬಲ್ಲಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ವಿಟ್ಲ-ಸಾಲೆತ್ತೂರು-ಮಂಗಳೂರು ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಜಲವೃತಗೊಂಡಿದೆ. ರಸ್ತೆ ಜಲವೃತಗೊಂಡಿದ್ದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಲವು ತಾಸುಗಳ ವರೆಗೆ ಪರದಾಟ ನಡೆಸಿದ್ದಾರೆ. ಇದೇ ರಸ್ತೆಯ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಮೂರು ಪಂಪ್ ಸೆಟ್, ಎರಡು ಮನೆಗಳು ಹಾಗೂ ಹಲವು ತೋಟಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.ರಸ್ತೆ ಮುಳುಗಡೆಯಾಗಿದ್ದರಿಂದ ಗ್ರಾಮಸ್ಥರು ವಾಹನ ಸಂಚಾರ ಮಾಡದಂತೆ ಚಾಲಕರಿಗೆ ಮುಂಜಾಗ್ರತೆ ವಹಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಅಬೂಬಕ್ಕರ್ ಹಾಜಿ ಅವರ ತೋಟಕ್ಕಿ ನೀರು ನುಗ್ಗಿ ಬೆಳೆನಾಶಗೊಂಡಿದೆ. ಮೂರುಕಜೆ ಎಂಬಲ್ಲಿ ತೋಟಕ್ಕೆ, ಕಾಪುಮಜಲು ದೇವಸ್ಥಾನ, ಪರ್ತಿಪ್ಪಾಡಿ ಮಸೀದಿ ಆವರಣಕ್ಕೆ ನೀರು ನುಗ್ಗಿದೆ. ಹಲವೆಡೆ ಕೃಷಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷಿದರ್ಶಿಗಳು ಮಾಹಿತಿ ನೀಡಿದ್ದಾರೆ.ವಿಟ್ಲ-ಬಿಸಿರೋಡ್-ಮಂಗಳೂರು ರಸ್ತೆಯಲ್ಲಿ ಬರುವ ಮಜ್ಜೋನಿ-ಕೋಡಪದವು-ಕರೈ ರಸ್ತೆಯ ಸುಮಾರು9 ಕಿ.ಮಿ ವರೆಗೂ ಮರಗಳು, ವಿದ್ಯುತ್ ಕಂಬಗಳು ಹಾಗೂ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿದ್ದರಿಂದ ವಾಹನ ಸಂಚಾರ ಮಧ್ಯಾಹ್ನವರೆಗೆ ಸ್ಥಗಿತಗೊಂಡಿದೆ. ಇದರಿಂದ ಮಜ್ಜೋನಿ-ಕೋಡಪದವು-ಮದಕ-ಕರೈ ವರೆಗೆ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಸ್ಥಳಕ್ಕೆ ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಿಕ್ ಸರಾವು, ನಿಶಾಂತ್, ಮೆಸ್ಕಾಂ ಹಾಗೂ ಕಂದಾಯ ಅಧಿಕಾರಿಗಳು ಆಗಮಿಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಎಂಬಲ್ಲಿ ಮೂರು ಕಡೆ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿದ್ದರಿಂದ ಕೆಲವು ಹೊತ್ತು ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮೂರು ಜೆಸಿಬಿ ವಾಹನ ಮೂಲಕ ಮಣ್ಣು ತೆರವುಗೊಳಿಸಿ, ಏಕಮುಖವಾಗಿ ವಾಹನ ಸಂಚಾರ ಅನುಮಾಡಿಕೊಡಲಾಗಿದೆ.

Related posts

Leave a Reply