Header Ads
Breaking News

ವಾಮದಪದವಿನಲ್ಲಿ ನಿರ್ಮಾಣಗೊಳ್ಳುತ್ತಿವೆ ಎರಡು ಬಿಸಿಎಂ ಹಾಸ್ಟೆಲ್‌ಗಳು

ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ವಾಮದಪದವಿನಲ್ಲಿ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಎರಡು ವಿದ್ಯಾರ್ಥಿ ನಿಲಯಗಳು ನಿರ್ಮಾಣಗೊಳ್ಳುತ್ತಿದೆ. ಸಾಮಾನ್ಯವಾಗಿ ಒಂದು ಊರಿಗೆ ಒಂದು ಹಾಸ್ಟೆಲ್ ಮಂಜೂರು ಮಾಡಿಸಿಕೊಳ್ಳುವುದು ಕಷ್ಟ. ಅಂತಹುದರಲ್ಲಿ ಒಂದೇ ಗ್ರಾಮದಲ್ಲಿ, ಒಂದೇ ವಿನ್ಯಾಸದ, ಎರಡು ಸುಸಜ್ಜಿತ ವಿದ್ಯಾರ್ಥಿ ನಿಲಯಗಳು ನಿರ್ಮಾಣಗೊಳ್ಳುತ್ತಿದೆ. ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ ಸೌಲಭ್ಯವೂ ಶಾಲೆ, ಕಾಲೇಜಿನ ಪಕ್ಕವೇ ಇರುವುದರಿಂದ ವಾಮದಪದವು ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬಿಸಿಎಂ ಇಲಾಖೆಯ 4 ಹಾಸ್ಟೆಲ್‌ಗಳು ವಾಮದಪದವಿನಲ್ಲಿದ್ದು ತಲಾ ಒಂದು ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ಗಳಾದರೆ, ಎರಡು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಾಗಿವೆ. ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸ್ವಂತ ಕಟ್ಟಡವಿದ್ದರೆ, ಬಾಲಕಿಯರ ವಿದ್ಯಾರ್ಥಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತೀ ವರ್ಷವೂ ವಿದ್ಯಾರ್ಥಿನಿಯರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ವಿಶಾಲವಾದ ಹಾಗೂ ಸುಸಜ್ಜಿತ ವಿದ್ಯಾರ್ಥಿನಿ ನಿಲಯದ ಅವಶ್ಯಕತೆ ಮನಗಂಡು ಒಂದೇ ಗ್ರಾಮದಲ್ಲಿ ಎರಡು ಬಾಲಕಿಯರ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಕಟ್ಟಡದಲ್ಲಿರುವ ವಿದ್ಯಾರ್ಥಿನಿ ನಿಲಯ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

 3.32 ಕೋಟಿ ರುಪಾಯಿ ಹಾಗೂ 3.36 ಕೋಟಿ ರುಪಾಯಿಯ ಎರಡು ಪ್ರತ್ಯೇಕ ವಿದ್ಯಾರ್ಥಿನಿ ನಿಲಯಗಳು ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಪಾಲೆದಡಿ ಹಾಗೂ ಪಚ್ಚೇರು ಪಲ್ಕೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಏಕ ರೂಪದ ವಿನ್ಯಾಸ ಹೊಂದಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ 19 ವಿದ್ಯಾರ್ಥಿ ಕೊಠಡಿಗಳು, 1 ಅಡುಗೆಕೋಣೆ, 1 ಡೈನಿಂಗ್, 1 ಸ್ಟೋರ್‌ರೂಂ, ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿಗಳು ಇದರಲ್ಲಿವೆ. 2017ರಲ್ಲಿ ಮಂಜೂರುಗೊಂಡಿದ್ದು ೨೦೧೮ರ ಎಪ್ರಿಲ್ ತಿಂಗಳಿನಲ್ಲಿ ನಿರ್ಮಾಣ ಕಾಮಗಾರಿ ಆರಂಭ ಗೊಂಡಿದೆ, ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬೆಂಗಳೂರಿನ ಎಂ.ಕೆ.ಕೆ.ವಿ. ಕನ್‌ಸ್ಟ್ರಕ್ಷನ್ ಸಂಸ್ಥೆ ನಿರ್ಮಾಣಗುತ್ತಿಗೆಯನ್ನು ವಹಿಸಿಕೊಂಡಿದ್ದು ಎರಡೂ ಕಟ್ಟಡಗಳ ಕಾಮಗಾರಿ ಒಟ್ಟಿಗೆ ಪೂರ್ಣಗೊಳ್ಳಲಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರ ಅಧಿಕಾರವಧಿಯಲ್ಲಿ ತನ್ನ ಅಭಿವೃದ್ದಿ ಕಾರ್ಯಗಳು ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಬದಲಾಗಿ ಗ್ರಾಮೀಣ ಭಾಗಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದರು ಎನ್ನುವುದಕ್ಕೆ ಗ್ರಾಮೀಣ ಪ್ರದೇಶವಾದ ವಾಮದಪದವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಎರಡು ವಿದ್ಯಾರ್ಥಿ ನಿಲಯಗಳೇ ಸಾಕ್ಷಿ. ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯದ ಸ್ವಂತ ಕಟ್ಟಡ ಬೇಕೆನ್ನುವ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಮಾಜಿ ಸಚಿವ ಬಿ. ರಮನಾಥ ರೈ ಅವರ ಪ್ರಸ್ತಾವನೆಯಂತೆ ಎರಡು ಕಟ್ಟಡಗಳು ವಾಮದಪದವಿಗೆ ಮಂಜೂರುಗೊಂಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೂರಕ ವ್ಯವಸ್ಥೆಗಳನ್ನು ಒದಗಿಸಿಕೊಡಬೇಕೆನ್ನುವ ಅವರ ಕನಸಿನಂತೆ ಈ ಕಟ್ಟಡಗಳು ತಲೆ ಎತ್ತುತ್ತಿದೆ.

Related posts

Leave a Reply

Your email address will not be published. Required fields are marked *