Header Ads
Breaking News

ವಾಮದಪದವು ಸರಕಾರಿ ಪ.ಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ : ಸಚಿವ ಸುರೇಶ್ ಕುಮಾರ್ ಅವರಿಂದ ಕಟ್ಟಡ ಲೋಕಾರ್ಪಣೆ

ಬಂಟ್ವಾಳ: ಕಡ್ಡಾಯ ವರ್ಗಾವಣೆ ಪದವೇ ಅಸಂಬದ್ಧವಾಗಿದ್ದು, ಶಿಕ್ಷಕರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತರುವ ಚಿಂತನೆ ಇದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಶಿಕ್ಷಕರ ಹೊಸ ಪಿಂಚಣಿ ಯೋಜನೆ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಕರ್ನಾಟಕ ನೀತಿಯನ್ನು ಅಳವಡಿಸಿಕೊಂಡು ಉತ್ತಮ, ಆರೋಗ್ಯಕರ ಶಿಕ್ಷಣ ನೀಡಲು ಆದ್ಯತೆ ನೀಡಲಾಗುವುದು ಎಂದ ಸಚಿವರು ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮನಸ್ಥಿತಿಗೆ ಬಂದಿರುವ ಪ.ಪೂ.ಕಾಲೇಜಿನ ಶಿಕ್ಷಕವೃಂದವನ್ನು ಅಭಿನಂದಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಅವರು ಮಾತನಾಡಿ ಪ್ರಾಮಾಣಿಕತೆ, ಶಿಸ್ತಿಗೆ ಇನ್ನೊಂದು ಹೆಸರು ಸುರೇಶ್ ಕುಮಾರ್, ಅವರು ಶಿಕ್ಷಣ ಸಚಿವರಾಗಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಅವರು ಹೇಳಿದರು. ಪ್ರಾಚಾರ್ಯರು, ಶಿಕ್ಷಕರಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿದಾಗ ಮಾತ್ರ ಮಕ್ಕಳಿಗೂ ಗುಣಮಟ್ಟದ, ಬದುಕುವ ಶಿಕ್ಷಣ ನೀಡಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಮಾತನಾಡಿ ಶಿಕ್ಷಣ ಇಲಾಖೆ ಉತ್ತಮ ಸಚಿವರನ್ನು ಪಡೆದಿದ್ದು, ದ.ಕ.ಜಿಲ್ಲೆಯ ಶಿಕ್ಷಣ ಸಂಸ್ಥೆ ಗಳಿಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಪಂ ಸದಸ್ಯ ಪ್ರಭಾಕರ ಪ್ರಭು, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *