Breaking News

ವಾಲ್ಪಾಡಿ ಕೆರೆಗೆ ವಿಷಪ್ರಾಶನಗೈದು ಮೀನು ಬೇಟೆ, ಕುಡಿಯುವ ನೀರಿಗೆ ತೊಂದರೆ ಗ್ರಾಮಸ್ಥರಿಂದ ಪೊಲೀಸರಿಗೆ ದೂರು


ವಾಲ್ಪಾಡಿ ಗ್ರಾಪಂ ವ್ಯಾಪ್ತಿಯಲ್ಲಿನ ಅಪಾರ ಮೀನುಗಳನ್ನು ಹೊಂದಿರುವ ಸುಮಾರು ೨೫ ಎಕ್ರೆಯಷ್ಟು ವಿಸ್ತೀರ್ಣಕ್ಕೆ ಹರಡಿರುವ ಏಂದ್ರಟ್ಟ ಕೆರೆಗೆ ವಿಷಪ್ರಾಶನಗೈದು ಮೀನು ಹಿಡಿದ ಪರಿಣಾಮವಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕೆರೆಯಲ್ಲಿ ಎಪ್ರಿಲ್ ಮೇ ತಿಂಗಳಲ್ಲೂ ಸಾಕಷ್ಟು ನೀರಿದೆ ಹಾಗೂ ಅಪಾರ ಪ್ರಮಾಣದಲ್ಲಿ ಮೀನುಗಳೂ ಇವೆ. ದರೆಗುಡ್ಡೆ, ಶಿರ್ತಾಡಿ ಹಾಗೂ ವಾಲ್ಪಾಡಿ ಗ್ರಾಮಸ್ಥರಿಗೆ ನಿತ್ಯ ಬಳಕೆಗೆ, ಕೃಷಿಗೆ ಈ ಕೆರೆಯ ನೀರನ್ನೇ ಆಶ್ರಯಿಸಿದ್ದಾರೆ ಹಾಗೂ ಕಾಡು ಪ್ರಾಣಿಗಳು ಕೂಡಾ ಬಾಯಾರಿಕೆಗೂ ಈ ನೀರನ್ನೇ ಆಶ್ರಯಿಸಿವೆ. ದರೆಗುಡ್ಡೆ ಪರಿಸರದ ಕೆಲವು ಮಂದಿ ಈ ಹಿಂದೆ ಮೂರು ಬಾರಿ ಈ ಕೆರೆಯ ಮೀನನ್ನು ಹಿಡಿಯಲು ಪ್ರಯತ್ನಿಸಿದ್ದು ಸ್ಥಳೀಯರ ಆಕ್ಷೇಪದ ಹಿನ್ನೆಲೆಯಲ್ಲಿ ವಾಪಸ್ಸು ತೆರಳಿದ್ದಾರೆನ್ನಲಾಗಿದೆ. ಈ ಪರಿಸರದ ಜನರು ಇಲ್ಲದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ದರೆಗುಡ್ಡೆ ಪರಿಸರದ ಸುಮಾರು ೫೦ಕ್ಕೂ ಅಧಿಕ ಮಂದಿ ಮೈಲು ತುತ್ತು ಮತ್ತು ಇತರ ವಿಷ ಪದಾರ್ಥಗಳನ್ನು ಕೆರೆಗೆ ಹಾಕಿ ಮೀನಿನ ಬೇಟೆ ನಡೆಸಿದ್ದಾರೆ.
ಸ್ಥಳೀಯರು ಕೂಡಲೇ ತಹಸೀಲ್ದಾರರು, ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಪಂದಿಸದಿದ್ದಾಗ ಸಹಾಯಕ ಕಮೀಷನರ್‌ಗೆ ನೇರ ದೂರು ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೀನು ಬೇಟೆಗಾರರನ್ನು ಚದುರಿಸಿದರೆನ್ನಲಾಗಿದೆ. ಕೆರೆಗೆ ವಿಷ ಹಾಕಿ ಮೀನು ಬೇಟೆ ಮಾಡಿ ಪರಿಸರಕ್ಕೆ ಹಾನಿಯುಂಟು ಮಾಡಿದ ಬಗ್ಗೆ ದರೆಗುಡ್ಡೆ ಪಂ. ಸದಸ್ಯ ಜಯ ಶೆಟ್ಟಿ ಸಹಿತ ಹಲವರ ವಿರುದ್ಧ ಸ್ಥಳೀಯರು ಪೊಲೀಸರಿಗೆ ಲಿಖಿತ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೆರೆಯಿಂದ ಮೀನು ಹಿಡಿದ ಜನರನ್ನು ಕರೆಸಿ ವಿಚಾರಣೆ ನಡೆಸಿದ್ದೇವೆ. ಮುಂದೆ ಮೀನು ಹಿಡಿಯದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

Related posts

Leave a Reply