Breaking News

ವಿಂಬಲ್ಡನ್ ಟೆನ್ನಿಸ್ ಲಂಡನ್, ಫೆಡರರ್ ದಾಖಲೆ ಚಾಂಪಿಯನ್, ಮುಗುರುಜಾ ಮೊದಲ ಚಾಂಪಿಯನ್


ಅಜೇಯ ಓಟ ಮುಂದುವರಿಸಿದ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ವಿಂಬಲ್ಡನ್ ಚಾಂಪಿಯನ್ಷಿಪ್ನ ಪುರುಷರ ವಿಭಾಗದ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದರು. ಆರನೇ ವಿಂಬಲ್ಡನ್ ಪ್ರಶಸ್ತಿಯ ಕನಸು ಹೊತ್ತು ಬಂದಿದ್ದ ಅಮೆರಿಕದ ವೀನಸ್ ವಿಲಿಯಮ್ಸ್ ಅವರನ್ನು ನೇರ ಸೆಟ್ಗಳಿಂದ ಮಣಿಸಿದ ಸ್ಪೇನ್ನ ಗಾರ್ಬೈನ್ ಮುಗುರುಜಾ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.
ಅಂತಿಮ ಹಣಾಹಣಿಯಲ್ಲಿ ಕ್ರೊವೇಷಿಯಾದ ಮರಿನ್ ಸಿಲಿಕ್ ಅವರನ್ನು ೬-೩, ೬-೧, ೬-೪ರಲ್ಲಿ ಮಣಿಸಿದ ಫೆಡರರ್ ಎಂಟು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಈ ಜಯದೊಂದಿಗೆ ಫೆಡರರ್ ಒಟ್ಟು ೧೯ ಗ್ರ್ಯಾನ್ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎಂದೆನಿಸಿಕೊಂಡರು. ೩೫ನೇ ವಯಸ್ಸಿನಲ್ಲಿ ವಿಂಬಲ್ಡನ್ ಗೆಲ್ಲುವುದರೊಂದಿಗೆ ಈ ಪ್ರಶಸ್ತಿ ಗೆದ್ದ ಅತಿ ಹಿರಿಯ ಆಟಗಾರ ಎಂಬ ದಾಖಲೆಯೂ ರೋಜರ್ ಫೆಡರರ್ ಅವರ ಹೆಸರಿಗೆ ಸೇರಿತು. ೨೦೧೪ರಲ್ಲಿ ಅಮೆರಿಕ ಓಪನ್ನಲ್ಲಿ ಪ್ರಶಸ್ತಿ ಗೆದ್ದಿದ್ದ ಸಿಲಿಕ್ಗೆ ಇಲ್ಲಿ ಏಳನೇ ಶ್ರೇಯಾಂಕ ನೀಡಲಾಗಿತ್ತು. ಸೆಮಿಫೈನಲ್ನಲ್ಲಿ ಅಮೆರಿಕದ ಸ್ಯಾಮ್ ಕ್ವೆರಿ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ಸಿಲಿಕ್ ಭರವಸೆಯಿಂದಲೇ ಅಂಗಳಕ್ಕೆ ಇಳಿದಿದ್ದರು.
ಮಹಿಳಾ ವಿಭಾಗದ ಅಂತಿಮ ಹಣಾಹಣಿಯಲ್ಲಿ ಮುಗುರುಜಾ ೭-೫ ಮತ್ತು ೬-೦ಯಿಂದ ಗೆದ್ದು ಬೀಗಿದರು. ಸೆಂಟರ್ ಕೋರ್ಟ್ನಲ್ಲಿ ಮೊದಲ ಬಾರಿ ನಡೆದ ಮಹಿಳೆಯರ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಇಬ್ಬರೂ ಉನ್ನತ ಮಟ್ಟದ ಆಟ ಪ್ರದರ್ಶಿಸಿದರು. ೨೩ ವರ್ಷದ ಮುಗುರುಜಾ ಮತ್ತು ೩೭ ವರ್ಷದ ವೀನಸ್ ನಡುವಿನ ಪಂದ್ಯ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿತ್ತು. ಒಂದು ತಾಸು ೧೭ ನಿಮಿಷ ನಡೆದ ಪಂದ್ಯದ ಮೊದಲ ಸೆಟ್ನಲ್ಲಿ ಸಮಬಲದ ಹೋರಾಟ ಕಂಡು ಬಂದರೂ ಎರಡನೇ ಸೆಟ್ನಲ್ಲಿ ಮುಗುರುಜಾ ಏಕಪಕ್ಷೀಯ ಜಯ ಸಾಧಿಸಿದರು. ಈ ಮೂಲಕ ೨೦೧೫ರ ಫೈನಲ್ನಲ್ಲಿ ವೀನಸ್ ಅವರ ಸಹೋದರಿ ಸೆರೆನಾ ವಿಲಿಯಮ್ಸ್ ಎದುರು ಅನುಭವಿಸಿದ ಸೋಲಿನ ನಿರಾಸೆಯನ್ನು ಮರೆತರು. ಕಳೆದ ವರ್ಷ ಫ್ರೆಂಚ್ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ಮುಗುರುಜಾ ಸಾಧನೆಯೊಂದಿಗೆ ವಿಂಬಲ್ಡನ್ ಟೂರ್ನಿಯ ಪ್ರಶಸ್ತಿ ಎತ್ತಿ ಹಿಡಿದ ಸ್ಪೇನ್ನ ಎರಡನೇ ಆಟಗಾರ್ತಿ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ೧೯೯೪ರಲ್ಲಿ ಸ್ಪೇನ್ನ ಕೊಂಚಿತಾ ಮಾರ್ಟಿನೆಜ್ ಪ್ರಶಸ್ತಿ ಗೆದ್ದಿದ್ದರು. ಎರಡು ವರ್ಷಗಳ ಹಿಂದೆ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಸೋತಾಗ ನೀನು ಮುಂದೊಂದು ದಿನ ಖಂಡಿತಾ ಗೆಲುವು ಸಾಧಿಸುತ್ತೀಯಾ ಎಂದು ಅಂದಿನ ನನ್ನ ಎದುರಾಳಿ ಸೆರೆನಾ ವಿಲಿಯಮ್ಸ್ ಹೇಳಿದ್ದರು. ಅವರು ಹೇಳಿದ ಆ ದಿನದ ಸಂಭ್ರಮ ಇಂದು ಬಂದೊದಗಿದೆ ಎಂದು ಮುಗುರುಜಾ ಹೇಳಿದರು.
ಪುರುಷರ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಪೋಲೆಂಡ್ನ ಲೂಕಾಸ್ ಕುಬೋಟ್ ಮತ್ತು ಬ್ರೆಜಿಲ್ನ ಮಾರ್ಸೆಲೊ ಮೆಲೊ ಪ್ರಶಸ್ತಿ ಗೆದ್ದರು. ಓ ಮರಾಕ್ ಮತ್ತು ಮೇಟ್ ಪೆವಿಕ್ ಜೋಡಿಯನ್ನು‌ಇವರು ೫-೭, ೭-೫, ೭-೬(೨), ೩-೬, ೧೩-೧೧ರಿಂದ ಮಣಿಸಿದರು.
ರಷ್ಯಾದ ಜೋಡಿ ಎಕಟೇರಿಯನ್ ಮಕರೋವಾ ಮತ್ತು ಎಲೆನಾ ವೆಸ್ನಿನಾ ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಥೈವಾನ್ನ ಹೋ ಚಿಂಗ್ ಚಾನ್ ಮತ್ತು ರೊಮೇನಿಯಾದ ಮೋನಿಕಾ ನಿಕುಲೆಸ್ಕು ಜೋಡಿಯನ್ನು ೬-೦, ೬-೦ ಸೆಟ್ಗಳಿಂದ ಮಣಿಸಿದರು.

Related posts

Leave a Reply