Header Ads
Header Ads
Breaking News

ವಿಟ್ಲದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದ ಲೋಕಾರ್ಪಣೆ

 ವಿಟ್ಲದ ಯೂತ್ ಬಿಲ್ಲವ ಎಸೋಸಿಯೇಶನ್ ಮತ್ತು ಮಹಿಳಾ ಘಟಕದ ವತಿಯಿಂದ ವಿಟ್ಲದ ಶಿವಗಿರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ಬೆಳಗ್ಗೆ ಗಣಪತಿ ಹವನ, ಸತ್ಯನಾರಾಯಣ ಪೂಜೆ ನಡೆದವು. ಸಂಜೆ ಜಿಲ್ಲೆಯ ಪ್ರಸಿದ್ದ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಕೋಟಿಚೆನ್ನಯ ತುಳು ಯಕ್ಷಗಾನ ಪ್ರದರ್ಶನಗೊಂಡಿತು. ವಿಟ್ಲ ಸುರಕ್ಷ ಹೆಲ್ತ್ ಸೆಂಟರ್‌ನ ವೈದ್ಯ ಡಾ.ಗೀತಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರವಿ ಕಕ್ಕೆಪದವು ಸಮುದಾಯ ಭವನವನ್ನು ಉದ್ಘಾಟಿಸಿದರು. 
ಉದ್ಘಾಟನಾ ಸಭೆಯಲ್ಲಿ ಆಶೀರ್ವಚನ ನೀಡಿದ ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಅವರು ಐತಿಹಾಸಿಕ ಮಹತ್ವ ಹೊಂದಿರುವ ಬಿಲ್ಲವ ಸಮಾಜ ಬಾಂಧವರು ಭಿನ್ನಾಭಿಪ್ರಾಯಗಳಿಂದ ಮುಕ್ತರಾಗಿ ಸದೃಢ ಸಂಘಟನೆಗಳ ಮೂಲಕ ಸತ್ಕಾರ್ಯಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ನುಡಿದರು.
ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಮಾತನಾಡಿ ಹತ್ತು ಜನರಿಗೆ ಉಪಕಾರವಾಗುವ ಕಾರ್‍ಯ ಮಾತ್ರ ಸರ್ವ ಸಮಾಜದ ಶ್ಲಾಘನೆಗೆ ಪಾತ್ರವಾಗುತ್ತದೆ. ವಿಟ್ಲದಲ್ಲಿ ಸಮುದಾಯ ಭವನ ಸಂದರ್ಭೋಚಿತವಾಗಿ ನಿರ್‍ಮಾಣಗೊಂಡಿದೆ ಎಂದು ತಿಳಿಸಿದರು.

   ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಹಿಂದೆ ಸಾಮಾಜಿಕ ಪದ್ಥತಿಯ ನೆಪದಲ್ಲಿ ಬಿಲ್ಲವರು ಅಸ್ಪೃಶ್ಯರಂತೆ ಬದುಕಬೇಕಾಗಿದ್ದ ಪರಿಸ್ಥಿತಿ ಇತ್ತು ಎಂದು ತಿಳಿಸಿದರುಈ ಸಂದರ್ಭದಲ್ಲಿ ಲಯನ್ಸ್ ಗವರ್ನರ್ ಆಗಿ ನಿಯೋಜನೆಗೊಂಡ ಡಾ. ಗೀತಪ್ರಕಾಶ್, ಕಬಡ್ಡಿ ಕೋಚ್ ಜಗದೀಶ್ ಕುಂಬಳೆ, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ನಾರಾಯಣ ಪೂಜಾರಿ, ನೃತ್ಯ ಕಲಾವಿದ ಆರ್.ಕೆ.ಆರ್ಟ್ಸ್‌ನ ರಾಜೇಶ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಮಾಜಿ ಅಧ್ಯಕ್ಷರುಗಳಾದ ಸತ್ಯನಾರಾಯಣ ಎಸ್., ಪ್ರಕಾಶ್ ವಿಟ್ಲ, ಶ್ರೀಧರ ಬಾಳೆಕಲ್ಲು, ಸಂಜೀವ ಎಂ., ಸಂಜೀವ ಪೂಜಾರಿ ನಿಡ್ಯ, ಮಹಿಳಾ ಘಟಕದ ಪುಷ್ಪಾ ಸುಂದರ ಪೂಜಾರಿ, ಸುಜಾತ ಸಂಜೀವ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಜಗದೀಶ್ ಕುಂಬಳೆ, ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ವಿಟ್ಲ ಯೂತ್ ಬಿಲ್ಲವ ಎಸೋಸಿಯೇಶನ್ ಕಾರ್‍ಯದರ್ಶಿ ಹರೀಶ್ ಕೆ, ಜಗದೀಶ್ ಪಾಣೆಮಜಲು, ದಿನೇಶ್ ರಾಯಿ ಭಾಗವಹಿಸಿದ್ದರು.

Related posts

Leave a Reply