Header Ads
Header Ads
Breaking News

ವಿಟ್ಲದಲ್ಲಿ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನ

ವಿಟ್ಲ: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಕ್ಕಳ ಲೋಕ ಆಶ್ರಯದಲ್ಲಿ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಿತು.

ಬಂಟ್ವಾಳ ತಾಲ್ಲೂಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೆ ಮೋಹನ ರಾವ್ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣಗೈದರು. ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿಸೋಜ ಅವರು ಮೆರವಣಿಗೆ ಉದ್ಘಾಟಿಸಿದರು. ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸಚಿನ್ ಎ ಕನ್ನಡ ಧ್ವಜಾರೋಹಣಗೈದರು. ಹರ್ಷಕೃಷ್ಣ ಎ ಅಡ್ವಾಯಿ ನೂತನ ಶಾಲಾ ಕಟ್ಟಡ ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ಪಥಸಂಚಲನ, ಬ್ಯಾಂಡ್ ವಾದ್ಯಗಳನ್ನೂಳಗೊಂಡ ಆಕರ್ಷಕ ಮೆರವಣಿಗೆ ನಡೆಯಿತು.

ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ವೀಕ್ಷಿತ ಅವರು ಸಾಹಿತ್ಯದಲ್ಲಿ ಮಾತು, ಓದು, ಬರಹ ಇರಲೇಬೇಕು. ಕಲೆ ಸಾಹಿತ್ಯ, ಸಂಗೀತ ಮೊದಲಾದವುಗಳಲ್ಲಿ ಸಾಹಿತ್ಯ ಇನ್ನೂ ಜೀವಂತವಾಗಿದೆ. ಸಾಹಿತ್ಯ ಸಮ್ಮೇಳನ ಎಂಬುದು ಒಂದು ಸಾಂಸ್ಕೃತಿಕ ಹಬ್ಬವಾಗಿದೆ. ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಒಂದು ಶೈಕ್ಷಣಿಕ ಜಾತ್ರೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ ಅವರು ಮಕ್ಕಳಲ್ಲಿ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿಸಲು ಇಂತಹ ಸಾಹಿತ್ಯ ಸಮ್ಮೇಳನಗಳು ಪೂರಕವಾಗಿದೆ. ಬಾಲ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಿದಾಗ ಸಾಹಿತ್ಯ ಉಳಿವು ಸಾಧ್ಯವಾಗುತ್ತದೆ. ಪ್ರತಿಯೊಂದು ಶಾಲೆಗಳಲ್ಲಿ ಮೊಬೈಲ್ ಗ್ರಂಥಾಲಯ ನಿರ್ಮಾಣಗೊಂಡಾಗ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಯುತ್ತದೆ. ಇದರಿಂದ ಭಾಷೆ ಪ್ರಬುದ್ಧತೆ ಹೆಚ್ಚುತ್ತದೆ. ಬಾಲ ಸಾಹಿತ್ಯದ ಅನಾರಣ ಸಮ್ಮೇಳನಗಳ ಮೂಲಕ ಸಾಧ್ಯವಾಗುತ್ತದೆ. ಸಾಹಿತ್ಯ ಪರಂಪರೆ ಮುಂದುವರೆಯಬೇಕು. ಆಂಗ್ಲ ಭಾಷೆಯ ಹೆಚ್ಚು ಅವಲಂಬನೆ ಸರಿಯಲ್ಲ ಎಂದು ಹೇಳಿದರು.

ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಚಿಂತಕ ಹಾಗೂ ಸಾಹಿತಿ ಅರವಿಂದ ಚೊಕ್ಕಾಡಿ ಅವರು ಮಕ್ಕಳಲ್ಲಿ ಸಾಹಿತ್ಯ ಪ್ರವೃತ್ತಿ ಬೆಳೆಸಬೇಕು. ಮಕ್ಕಳು ಬರೆದ ಸಾಹಿತ್ಯವನ್ನು ಹಿರಿಯರು ಓದಬೇಕು. ಇದರಿಂದ ಮಕ್ಕಳ ಮನಸ್ಸು ಅರ್ಥವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಸಾದ್, ಮಕ್ಕಳ ಲೋಕದ ಅಧ್ಯಕ್ಷ ಮಹಾಬಲ ಭಟ್ ನೆಗಳಗುಳಿ, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಸವಿತಾ ಎಸ್ ಭಟ್ ಅಡ್ವಾಯಿ, ಶಾಲಾ ಮುಖ್ಯ ಶಿಕ್ಷಕ ಕುಂಞನಾಯ್ಕ, ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿ ಮೇಧ ನಾಯರ್‌ಪಲ್ಲ ಉಪಸ್ಥಿತರಿದ್ದರು.

Related posts

Leave a Reply