Header Ads
Header Ads
Breaking News

ವಿಟ್ಲದ ಕಸದ ಸಮಸ್ಯೆ, ಪಟ್ಟಣ ಪಂಚಾಯತ್ ಸಭೆಯಲ್ಲಿ ಬಿಸಿ ಚರ್ಚೆ


ಒಂದು ಕಸದ ವಾಹನ ಮಾತ್ರ ವಿಟ್ಲ ಪೇಟೆಯಲ್ಲಿ ಕಸ ಸಂಗ್ರಹಿಸುತ್ತಿತ್ತು. ದುರಸ್ತಿಗೆ ತೆರಳಿದ್ದ ಮತ್ತೊಂದು ವಾಹನ ವಿಶೇಷ ಸೌಲಭ್ಯ ಮತ್ತು ಜಾಗವನ್ನು ಜೋಡಿಸಲ್ಪಟ್ಟು ಶನಿವಾರ ಸಂಜೆ ಬರಲಿದೆ. ಆ ಬಳಿಕ ಎಲ್ಲ ೧೮ ವಾರ್ಡುಗಳಿಗೆ ತೆರಳಿ ಕಸ ಸಂಗ್ರಹಿಸಲಿದೆ ಎಂದು ಅಧ್ಯಕ್ಷ ಅರುಣ್ ಎಂ. ವಿಟ್ಲ ಹೇಳಿದರು.
ಅವರು ಶನಿವಾರ ವಿಟ್ಲ ಪ. ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಸದಸ್ಯೆ ದಮಯಂತಿ ಅವರು ಕಸದ ತೆರಿಗೆಯನ್ನು ವಸೂಲಿ ಮಾಡುತ್ತೀರಿ, ಕಸವನ್ನು ಸಂಗ್ರಹಿಸುವುದಿಲ್ಲ ಎಂದು ವಾರ್ಡಿನ ನಾಗರಿಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಅವರಿಗೆ ಏನು ಉತ್ತರ ಕೊಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದರು. ಅಧ್ಯಕ್ಷರು ಮಾತನಾಡಿ ಪಟ್ಟಣ ಪಂಚಾಯತ್ ವತಿಯಿಂದ ಬಡವರಿಗೆ ಮನೆ ಮಂಜೂರಾಗಿದೆ. ಅನುದಾನ ಬಿಡುಗಡೆಗೊಂಡಿದೆ. ಅವರಿಗೆ ಹಕ್ಕುಪತ್ರ ದೊರಕದ ಕಾರಣ ಬಾಕಿ ಉಳಿದಿದೆ. ತತ್‌ಕ್ಷಣ ಬಾಕಿ ಉಳಿದಿರುವ ಎಲ್ಲರಿಗೂ ಹಕ್ಕು ಪತ್ರ ನೀಡಬೇಕು ಎಂದು ವಿಟ್ಲ ಗ್ರಾಮಕರಣಿಕ ಪ್ರಕಾಶ್ ಅವರಿಗೆ ಸೂಚನೆ ನೀಡಿದರು. ಬೀದಿ ದೀಪಗಳ ಬಗ್ಗೆ ಹಲವು ದೂರುಗಳು ಕೇಳಿ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದರು.
ಸದಸ್ಯ ಜಯಂತ್ ಅವರು ಮಾತನಾಡಿ ೭ನೇ ವಾರ್ಡಿನಲ್ಲಿ ನೀರಕಣಿ ನೆಕ್ಕರೆಕಾಡು ರಸ್ತೆ ನಾದುರಸ್ತಿಯಲ್ಲಿದೆ. ೩೦ ವರ್ಷಗಳಿಂದ ಆ ರಸ್ತೆ ಸಾರ್ವಜನಿಕ ರಸ್ತೆಯಾಗಿದ್ದು ಹಿಂದಿನ ಗ್ರಾಮ ಪಂಚಾಯತ್ ಅನುದಾನ ಒದಗಿಸಿ, ರಸ್ತೆ ದುರಸ್ತಿ ಪಡಿಸಿದೆ. ಅದನ್ನು ಅಭಿವೃದ್ಧಿ ಪಡಿಸಲು ವ್ಯಕ್ತಿಯೋರ್ವರು ಈಗ ಅಡ್ಡಗಾಲು ಹಾಕುತ್ತಾರೆ ಎಂದು ಆರೋಪಿಸಿದರು. ಅದನ್ನು ಸರಿಪಡಿಸಬೇಕು ಮತ್ತು ಇನ್ನು ಮುಂದೆ ಕಟ್ಟಡ ನಿರ್ಮಿಸುವಾಗ ರಸ್ತೆ ಚರಂಡಿ ನಿರ್ಮಿಸಲು ಅವಕಾಶ ಕಲ್ಪಿಸುವ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಸಾರ್ವಜನಿಕ ರಸ್ತೆಗೆ ಅಡ್ಡಿ ಪಡಿಸುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ನಿರ್ಧರಿಸಲಾಯಿತು.
ಸದಸ್ಯ ಲೋಕನಾಥ ಶೆಟ್ಟಿ ಅವರು ಮಾತನಾಡಿ ಪುರಭವನ, ಸಹಕಾರಿ ಸಂಘ, ಕೆಪಿಟಿಸಿಎಲ್‌ಗೆ ತೆರಳು ರಸ್ತೆಯಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಲು ನಿರ್ಧರಿಸಲಾಗಿತ್ತು. ಅದರಂತೆ ಅಲ್ಲಿ ನಾಮಫಲಕ ಅಳವಡಿಸಲಾಗಿತ್ತು. ಅದಕ್ಕೆ ವ್ಯಕ್ತಿಯೋರ್ವರು ಆಕ್ಷೇಪಿಸಿದ್ದಾರೆ. ಇದೀಗ ನಾಮಫಲಕ ಕಾಣುತ್ತಿಲ್ಲ ಎಂದರು. ಸಂತೆಯ ದಿನವನ್ನು ಹೊರತುಪಡಿಸಿ, ಆ ರಸ್ತೆಯ ಬಲಬದಿಯಲ್ಲಿ ಪಾರ್ಕಿಂಗ್ ಅವಕಾಶವಿಲ್ಲ ಎಂದು ಪ. ಪಂಚಾಯತ್ ನಾಮಫಲಕ ಅಳವಡಿಸಲು ತೀರ್ಮಾನಿಸಿತು. ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಪಡಿತರ ಚೀಟಿದಾರರಿಗೆ ಸಾಮಗ್ರಿ ವಿತರಿಸಲು ತಡವಾಗಿ ಆರಂಭಿಸಲಾಗಿದೆ. ಅದನ್ನು ಮುಂದಿನ ತಿಂಗಳು ವಿಸ್ತರಿಸಬೇಕು. ಅದಕ್ಕೆ ಸಂಬಂಧಪಟ್ಟ ಅಽಕಾರಿಗಳು ನಿರ್ದೇಶಿಸಬೇಕು. ಸರ್ಕಾರದ ೯೪ಸಿ ಹಾಗೂ ೯೪ಸಿಸಿ ಯೋಜನೆಗಳ ಹಕ್ಕು ಪತ್ರಗಳನ್ನು ತಕ್ಷಣವೇ ಬಡವರಿಗೆ ನೀಡಬೇಕು. ಇದರಿಂದ ಅವರು ತುಂಬ ಪ್ರಯೋಜನ ಪಡೆಯುತ್ತಾರೆ. ಅವುಗಳಿಗೆ ಕಾನೂನು ತೊಡಕುಗಳು ಇದ್ದರೂ ಕೂಡಾ ಅಽಕಾರಿಗಳು ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. ಅದಕ್ಕೆ ಸೂಕ್ತ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯ ರಾಮದಾಸ ಶೆಣೈ, ಶ್ರೀಕೃಷ್ಣ, ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ, ಮಂಜುನಾಥ ಕಲ್ಲಕಟ್ಟ, ಸುನಿತಾ ಕೋಟ್ಯಾನ್, ಭವಾನಿ ರೈ ಕೊಲ್ಯ ಮೊದಲಾದವರು ಮಾತನಾಡಿದರು.

Related posts

Leave a Reply