Header Ads
Header Ads
Breaking News

ವಿಟ್ಲ: ಕಲ್ಲನ್ನು ಪುಡಿಮಾಡುವ ಯಂತ್ರದ ಶಬ್ಧ ಸಹಿಸಲಾಗದೆ ಸಿಡಿದೇಳುವ ಪರಿಸ್ಥಿತಿ

 ಕೇರಳಕ್ಕೆ ಎಂ ಸ್ಯಾಂಡ್ ಪೂರೈಕೆ ಮಾಡುವ ಉದ್ದೇಶದಿಂದ ಪುಣಚ ಗ್ರಾಮದ ಮೂಡಂಬೈಲು ಗೋಳಿತ್ತಡ್ಕದಲ್ಲಿ ಸ್ಥಾಪಿತವಾದ ಘಟಕದಿಂದ ಲಾರಿಗಳ ಅಬ್ಬರ ಹಾಗೂ ಕಲ್ಲಿನ ಪುಡಿ ಮಾಡುವ ಶಬ್ಧ ಸಹಿಸಲಾಗದೆ ಆಸುಪಾಸಿನ ನಿವಾಸಿಗಳು ಸಿಡಿದೇಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.ಸಾರಡ್ಕ – ತೋರಣಕಟ್ಟೆ – ಪುಣಚ ಸಂಪರ್ಕ ಕಲ್ಪಿಸುವ ರಸ್ತೆಯ ಮೂಡಂಬೈಲು ಗೋಳಿತ್ತಡ್ಕ ಎಂಬಲ್ಲಿ ಮುಖ್ಯ ರಸ್ತೆಯಿಂದ ಸುಮಾರು ೧೦೦ ಮೀಟರ್ ದೂರದಲ್ಲಿ ಜಾಗವನ್ನು ಗುತ್ತಿಗೆ ಪಡೆದುಕೊಳ್ಳುವ ಮೂಲಕ ಎಂ ಸ್ಯಾಂಡ್ ಘಟಕವನ್ನು ಸ್ಥಾಪಿಸಲಾಗಿದೆ. ಸುಮಾರು ೮೦ ಮೀಟರ್ ದೂರದಲ್ಲಿ ಮನೆ ಹಾಗೂ ಕೃಷಿ ಜಮೀನು ಇದ್ದರೂ ಈ ಘಟಕವನ್ನು ಸ್ಥಳೀಯರನ್ನು ಬಾಯಿ ಮಾತಿನಲ್ಲಿ ವಂಚಿಸುವ ಮೂಲಕ ಪರವಾನಿಗೆಯನ್ನು ಪಡೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಕಲ್ಲುಗಳನ್ನು ಸ್ಫೋಟಿಸುವ ವೇಳೆ ಸ್ಥಳೀಯ ನಿವಾಸಿಗಳು ಭಯದಲ್ಲಿ ಜೀವನ ನಡೆಸುವಂತಾಗಿದೆ. ಕಲ್ಲುಗಳನ್ನು ಯಂತ್ರಕ್ಕೆ ಹಾಕುವಾಗ ಬಾನೆತ್ತರಕ್ಕೆ ದೂಳುಗಳು ಹರಡಿ ವಾತಾವರಣ ಹಾಳಾಗುತ್ತಿದೆ. ಇಲ್ಲಿ ಎಂ ಸ್ಯಾಡ್ ನಡೆಸಲು ಜಾಗ ನೀಡಿದವರಲ್ಲಿ ಈ ಬಗ್ಗೆ ತಿಳಿಸಿದ್ದರೂ ಮಾತನಾಡುತ್ತೇವೆ ಮಾತ್ರ ಹೇಳುತ್ತಿದ್ದಾರೆ ವಿನಃ ಯಾವುದೇ ಪರಿಹಾರವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದರಿಂದ ರಸ್ತೆಗಳು ಹಾಳಾಗಿದೆ. ಸಾಕು ಪ್ರಾಣಿಗಳು ತೊಂದರೆ ಅನುಭವಿಸುತ್ತಿದೆ. ಚಿಕ್ಕ ಗಾತ್ರದ ಕಲ್ಲುಗಳನ್ನು ಸಿಡಿಸಲಾಗುತ್ತಿದೆ ಎಂದು ಹೇಳಿ ಇಲ್ಲಿ ಕೆಲಸ ಪ್ರಾರಂಭಿಸಿರುವ ಮಾಲಕರು ಇದೀಗ ಘನಗಾತ್ರದ ಕಲ್ಲುಗಳನ್ನು ಸಿಡಿಸಿ ಎಂ ಸ್ಯಾಡ್ ತಯಾರು ಮಾಡುತ್ತಿದ್ದಾರೆ. ಪಕ್ಕದ ಸುತ್ತಮುತ್ತಲಿನಲ್ಲಿ ಹತ್ತಕ್ಕೂ ಅಧಿಕ ಮನೆಗಳಿವೆ ಇದರಿಂದ ಜನರು ವಲಸೆ ಹೋಗುವ ಅನಿವಾರ್ಯತೆ ಎದುರಾಗಿದೆ. ರಸ್ತೆಗಳು ಗುಂಡಿ ಬಿದ್ದಿರುವುದರಿಂದ ವಾಹನ ಸಂಚಾರ ಕಷ್ಟವಾಗಿದೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸುತ್ತಾರೆ.

ಕಗ್ಗಲ್ಲು ಪುಡಿ ಮಾಡುವ ಘಟಕಗಳ ಸುತ್ತ ಹತ್ತು ಮೀಟರ್ ಎತ್ತರಕ್ಕೆ ಗೋಡೆ ನಿರ್ಮಾಣ ಮಾಡಬೇಕು, ನೀರು ಚಿಮಿಕಿಸಿಕೊಂಡೇ ಕೆಲಸ ಕಾರ್ಯ ಮಾಡಬೇಕು, ಮಾಲಿನ್ಯ ಪರಿಶೀಲನೆಯನ್ನು ಆಗಿಂದ ಆಗ ಮಾಡಿಕೊಂಡು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂಬ ನಿಯಮಗಳು ಇದೆ. ಆದರೆ ಎಲ್ಲಾ ಅಧಿಕಾರಿಗಳನ್ನು ಬೇರೆ ಬೇರೆ ಆಮಿಷಗಳ ಮೂಲಕ ಬಾಯಿ ಮುಚ್ಚಿಸಿ ಕಾನೂನು ಮೀರಿ ಘಟಕಗಳು ಕಾರ್ಯಾಚರಿಸುತ್ತಿದೆ.ಮೂಡಂಬೈಲು ಘಟಕದ ಸುತ್ತ ಜಲ್ಲಿ ಹುಡಿ ಗಾಳಿಗೆ ಹಾರಿ ಮರ ಗಿಡ – ಕೃಷಿ ತೋಟಗಳಲ್ಲಿ ಕುಳಿತುಕೊಳ್ಳುತ್ತಿದೆ. ಘಟಕವನ್ನು ಸೂಕ್ತ ರೀತಿಯಲ್ಲಿ ಮುಚ್ಚಿಕೊಂಡು ಶಬ್ದ ಹೊರ ಬಾರದಂತೆ ಕೆಲಸ ನಡೆಯದೆ ಆಸುಪಾಸಿನ ಮನೆಯವರು ಮನೆಯಲ್ಲಿ ಕೂರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನುಗಳನ್ನು ಗಾಳಿಗೆ ತೂರಿಕೊಂಡು ಕಾರ್ಯಾಚರಿಸುತ್ತಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಯಂತ್ರಗಳಿಗೆ ಲೋಡ್ ಗಟ್ಟಲೇ ಕಲ್ಲುಗಳನ್ನು ಸುರಿಯುವಾಗ ವಾತಾವರಣ ಇಡಿ ಹೊಗೆಯಿಂದ ಆವರಿಸುತ್ತದೆ. ಶಬ್ಧದಿಂದ ಇಲ್ಲಿ ಬದುಕಲು ಕಷ್ಟವಾಗುತ್ತಿದೆ. ಈ ಬಗ್ಗೆ ಮಾಲಕರಲ್ಲಿ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಾರಾಯಣ ಭಂಡಾರಿಎಂ ಸ್ಯಾಂಡ್ ಘಟಕಕ್ಕೆ ಕಗ್ಗಲ್ಲು ತಂದು ಹಾಕುವ ಜಾಗದಲ್ಲಿ ಲಾರಿಗಳು ತಿರುಗುವ ಉದ್ದೇಶದಿಂದ ಸಮತಟ್ಟು ಮಾಡಲಾಗಿದ್ದು, ಇದರಲ್ಲಿ ಗಡಿ ಗುರುತನ್ನು ನಾಶ ಪಡಿಸಲಾಗಿದೆ. ಜಾಗದಲ್ಲಿ ಇದ್ದ ಕಾಂಪೌಂಡ್ ತೆರವು ಮಾಡುವ ಮೂಲಕ ನೀರಿನ ಚರಂಡಿಯನ್ನು ನಾಶ ಪಡಿಸಲಾಗಿದೆ. ಈ ಮೂಲಕ ತಮ್ಮ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಪಕ್ಕದ ಜಾಗದ ಮಾಲಕರು ಆರೋಪಿಸಿದ್ದಾರೆ.

ಘಟಕ ವರ್ಷದ ಹಿಂದೆ ಸ್ಥಾಪನೆಯಾಗಿದ್ದರೂ ಕೆಲಸವನ್ನು ಈ ವರ್ಷ ಆರಂಭಿಸಲಾಗಿದೆ. ಮಳೆಗಾಲದಲ್ಲಿ ಘಟಕದಿಂದ ಬರುವ ತ್ಯಾಜ್ಯವನ್ನು ಮಳೆ ನೀರಿನ ಜತೆಗೆ ಸೇರ್ಪಡೆ ಗೊಳಿಸಿ ತೋಡುಗಳಿಗೆ ಹರಿಯ ಬಿಡಲಾಗಿದೆ. ಇದರಿಂದ ಕೃಷಿ ಕಾರ್ಯಗಳ ಜತೆಗೆ ಪ್ರಾಣಿಗಳಿಗೂ ಸಮಸ್ಯೆಗಳಾಗಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ ಹಾಗೂ ಗಣಿ ಇಲಾಖೆಗೆ ದೂರು ನೀಡಿದ್ದಾರೆ

Related posts

Leave a Reply