

ವಿಟ್ಲ ಚಂದಳಿಕೆ ಎಂಬಲ್ಲಿರುವ ಗ್ಯಾರೇಜ್ ಅಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣವಾಗಿ ನಾಶ ಹೊಂದಿದ ಘಟನೆ ನಡೆದಿದೆ.ಚಂದಳಿಕೆ ಹರೀಶ್ ಅವರಿಗೆ ಸೇರಿದ ಕಾರು ಗ್ಯಾರೇಜ್ ಗೆ ಬೆಂಕಿ ತಗುಲಿದೆ. ಗ್ಯಾರೇಜ್ ಒಳಗಡೆ 10 ಕ್ಕಿಂತಲೂ ಅಧಿಕ ವಾಹನಗಳಿದ್ದು, ಅವುಗಳ ಬದಿಗೆ ಸರಿದ ಸ್ಥಳೀಯರು ತೆರವುಗೊಳಿಸುತ್ತಿದ್ದಾರೆ. ಪುತ್ತೂರು ಅಗ್ಮಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಬರುವಷ್ಟರಲ್ಲಿ ಗ್ಯಾರೇಜ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಗ್ಯಾರೇಜ್ ಒಳಗಡೆ ರಿಪೇರಿಗೆಂದು ಇರಿಸಲಾದ ಕಾರು ಸಂಪೂರ್ಣವಾಗಿ ನಾಶಗೊಂಡಿದೆ. ಕೆಲವು ವಾಹನಗಳ ಪಾರ್ಟ್ ಗಳು ಕೂಡಾ ಬೆಂಕಿಗಾಹುತಿಯಾಗಿದೆ.
ಸುತ್ತಮುತ್ತಲಿನಲ್ಲಿ ಮನೆ, ಅಂಗಡಿಗಳು ಇದ್ದು, ಬೆಂಕಿ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಪಿಕಪ್ ವಾಹನ ಗಳ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳವರು ಆಗಮಿಸಿದ್ದು, ಬೆಂಕಿ ನಂದಿಸಿದರು. ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬಳಿಕ ಸ್ಥಳೀಯವಾಗಿ ವಾಹನಕ್ಕೆ ನೀರು ತುಂಬಿಸಿ ಕಾರ್ಯಾಚರಣೆ ಮುಂದುವರಿಸಿದರು. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.