Header Ads
Header Ads
Breaking News

ವಿಟ್ಲ ನೆಮ್ಮದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ:ನೂತನ ಆಧಾರ್ ಕಾರ್ಡ್ ನೋಂದಾವಣೆ, ತಿದ್ದುಪಡಿ ಕಾರ್ಯ ಸ್ಥಗಿತ

ವಿಟ್ಲ: ವಿಟ್ಲ ಹೋಬಳಿ ವ್ಯಾಪ್ತಿಗೊಳಪಟ್ಟ ವಿಟ್ಲ ನೆಮ್ಮದಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ ಆಧಾರ್ ತಿದ್ದುಪಡಿ ಹಾಗೂ ನೂತನ ಆಧಾರ್ ಕಾರ್ಡ್ ನೋಂದಾವಣೆ ಕಾರ್ಯ ಸ್ಥಗಿತಗೊಂಡಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ವಿಟ್ಲ ನಾಡಕಚೇರಿಯಲ್ಲಿ ಉಪತಹಶೀಲ್ದಾರ ರವಿಶಂಕರ್ ಅವರ ಜತೆ ಮಾತನಾಡಿ ದ ನಿಯೋಗ ಪುತ್ತೂರು ಬಿಸಿ ರೋಡ್ ಕಡೆಗಳಲ್ಲಿ ಆಧಾರ್ ಕೇಂದ್ರದಲ್ಲಿ ಯಾವುದೇ ಸಮಸ್ಯೆಯಿಲ್ಲ. ವಿಟ್ಲದಲ್ಲಿ ಮಾತ್ರ ಸಮಸ್ಯೆ ತಲೆದೋರಿದೆ. ತುರ್ತು ಸಂದರ್ಭದಲ್ಲಿ ಜನರು ಆಧಾರ್ ತಿದ್ದುಪಡಿಗೆ ದೂರದ ಪ್ರದೇಶಗಳಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ಅದಲ್ಲದೇ ಆಧಾರ್ ಕಾರ್ಡ್ ಮಾಡಿಸಲು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಆರು ತಿಂಗಳ ಟೋಕನ್‌ಗಳನ್ನು ಸುಮಾರು 300ಕ್ಕಿಂತಲೂ ಅಧಿಕ ಜನರಿಗೆ ಒಮ್ಮೆಲೆ ವಿತರಿಸಲಾಗಿತ್ತು. ಅವರು ಆಧಾರ್ ಮಾಡಿಸಲು ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಬಗ್ಗೆ ಸಾರ್ವಜನಿಕರಿಂದ ನಿರಂತರ ದೂರುಗಳು ಕೇಳಿ ಬರುತ್ತಿದೆ. ಪ್ರತಿಭಟನೆ ನಡೆಸಲು ಗ್ರಾಮಸ್ಥರು ಸಿದ್ಧತೆಯಲ್ಲಿದ್ದಾರೆ ಎಂದು ಮನವರಿಕೆ ಮಾಡಿದರು.
ಈ ನಿಯೋಗದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾಕಾಂತಿ ಶೆಟ್ಟಿ, ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ಸದಸ್ಯ ರಾಮ್‌ದಾಸ್ ಶೆಣೈ, ಗ್ರಾಮಸ್ಥರ ಪರವಾಗಿ ವಿಕೆಎಂ ಅಶ್ರಫ್, ಅಬ್ದುಲ್ ರಹಿಮಾನ್ ಕುರುಂಬಳ ಭಾಗವಹಿಸಿದ್ದರು.

Related posts

Leave a Reply