Header Ads
Header Ads
Breaking News

ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ:ರಥೋತ್ಸವಕ್ಕೆ ಸಾಕ್ಷಿಯಾದ ಭಕ್ತ ಸಮೂಹ

ಇತಿಹಾಸ ಪ್ರಸಿದ್ಧ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವವು ಸಂಭ್ರಮ ಸಡಗರದಿಂದ ನಡೆಯಿತು. ರಥೋತ್ಸವ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಸಾಕ್ಷಿಯಾದರು.ಜನವರಿ 14 ರಂದು ಧ್ಜಜರೋಹಣ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಹಸಿರುವಾಣಿ ಹೊರೆಕಾಣಿಕೆ ನಡೆದಿದೆ. ಜ. 18ರಂದು ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಅದ್ಧೂರಿ ಮೆರವಣಿಗೆ ಮೂಲಕ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿತ್ತು. ಬಳಿಕ ಬಯ್ಯದ ಬಲಿ ನಡೆದಿದೆ. ವಿವಿಧ ದಿನಗಳಲ್ಲಿ ಕೆರೆ ಆಯನ, ಹೂತೇರು ನಡೆಯಿತು. ಸೋಮವಾರ ರಾತ್ರಿ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮಿಸಿದ ಬಳಿಕ ರಥೋತ್ಸವ ಆರಂಭಗೊಂಡಿತು.ರಥೋತ್ಸವ ವೇಳೆ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು. ರಥೋತ್ಸವದದ ಬಳಿಕ ದೇವರ ಬೀದಿ ಮೆರವಣಿಗೆ ನಡೆಯಿತು. ರಥಗದ್ದೆಯಿಂದ ಬೊಬ್ಬೆಕೇರಿ ಮೂಲಕ ವಿಟ್ಲ ಪೇಟೆಗೆ ಮೆರವಣಿಗೆ ಸಾಗಿದೆ. ಈ ಸಂದರ್ಭ ವಿಟ್ಲದ ವರ್ತಕರು ತಮ್ಮ ಅಂಗಡಿ ಮುಂದೆ ಆರತಿ ಎತ್ತಿ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ವಿಟ್ಲ ಅರಮನೆಯ ಬಾಕಿಮಾರ್ ಗದ್ದೆಗೆ ತೆರಳಿದೆ. ಅಲ್ಲಿ ಕಟ್ಟೆ ಪೂಜೆ ನೆರವೇರಿಸಿ ಅಪ್ಪರಿಪಾದೆಯಲ್ಲಿ ಕಟ್ಟೆ ಪೂಜೆ ನಡೆದು ದೇವಸ್ಥಾನಕ್ಕೆ ಮೆರವಣಿಗೆ ಬಂದಿದೆ. ಪಂಚಲಿಂಗೇಶ್ವರ ಶಯನೋತ್ಸವ ನಡೆಯಿತು.

ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಊರ ಪರವೂರಿನ ಸಾವಿರಾರು ಭಕ್ತಾಧಿಗಳು ಬೆಳಿಗ್ಗಿನಿಂದಲೇ ದೇವಾಲಯಕ್ಕೆ ಆಗಮಿಸಲಾರಂಭಿಸಿದರು. ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ತೆರಳುವ ಎಲ್ಲಾ ಒಳರಸ್ತೆಯಲ್ಲಿ ಬೆಳಿಗ್ಗಿನಿಂದಲೇ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಭಕ್ತಾಧಿಗಳು ತಮ್ಮ ವಾಹನವನ್ನು ಹೊರಭಾಗದಲ್ಲಿ ನಿಲ್ಲಿಸಿ ನಡೆದುಕೊಂಡೇ ದೇವಸ್ಥಾನಕ್ಕೆ ತಲುಪ ಬೇಕಾಯಿತು.ಬೆಳಿಗ್ಗೆ ಕ್ಷೇತ್ರದಲ್ಲಿ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ವಿಟ್ಲ ಮಾದರಿ ಶಾಲಾ ವಠಾರದಲ್ಲಿ ಪಟ್ಲ ಯಕ್ಷಾಭಿಮಾನಿಗಳ ಬಳಗ ವಿಟ್ಲ ಅರ್ಪಿಸುವ ಬಪ್ಪನಾಡು ಮೇಳದವರಿಂದ ಬೊಳ್ಳಿದ ಬೊಲ್ಗುಡೆ ಯಕ್ಷಗಾನ ಬಯಲಾಟ ನಡೆಯಿತುವಿಟ್ಲ ರಥೋತ್ಸವದ ಪ್ರಯುಕ್ತ ವಿವಿಧ ಕಡೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದ್ದು, ದೇವಾಲಯದ ಜಾತ್ರಾ ಗದ್ದೆ ಸಹಿತ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿಟ್ಲ ಠಾಣಾ ಎಸ್.ಐ. ಯಲ್ಲಪ್ಪರವರ ನೇತೃತ್ವದಲ್ಲಿ ವಿಶೇಷ ಬಂದೋ ಬಸ್ತ್‌ನ್ನು ಏರ್ಪಡಿಸಲಾಗಿತ್ತು. ಮೊದಲೇ ಕೆಲವೆಡೆ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದ್ದರೂ ಜಾತ್ರಾ ಪ್ರಯುಕ್ತ ಕೆಲವೊಂದು ಆಯಕಟ್ಟಿನ ಸ್ಥಳದಲ್ಲಿ ಹೆಚ್ಚುವರಿ ಸಿ.ಸಿ ಕ್ಯಾಮರವನ್ನು ಅಳವಡಿಸಿಸಲಾಗಿತ್ತು. ಅಹಿತಕರ ಘಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಕಳ್ಳರ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸರು ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ದೇವಸ್ಥಾನದ ಸಮೀಪ ಸಾರ್ವಜನಿಕರಿಗೆ ಸಹಾಯವಾಗಲೆಂದು ಪೊಲೀಸ್ ಔಟ್‌ಪೋಸ್ಟನ್ನು ತೆರೆಯಲಾಗಿತ್ತು.

Related posts

Leave a Reply