Header Ads
Header Ads
Breaking News

ವಿಟ್ಲ ಪಂ.ಪಂ. ಅಧಿಕಾರಿಗಳಿಂದ ವಾದಿರಾಜ ಎಂಬವರ ಮನೆ ಧ್ವಂಸ ಬಡ ಕುಟುಂಬವನ್ನು ಬೀದಿಪಾಲು ಮಾಡಿದ ಆರೋಪ ಗ್ರಾಮಸ್ಥರಿಂದ ವಿಟ್ಲ ಪಟ್ಟಣ ಪಂಚಾಯತ್ ಮುಂಭಾಗ ಪ್ರತಿಭಟನೆ

ವಿಟ್ಲ: ವಿಟ್ಲ ಕಸಬಾ ಗ್ರಾಮದಲ್ಲಿ ವಾಸ ಮಾಡುತ್ತಿದ್ದ ಬಡ ವಾದಿ ರಾಜ ಅವರ ಮನೆಯನ್ನು ವಿಟ್ಲ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಏಕಾ‌ಏಕಿ ದಾಳಿ ಮಾಡಿ ಮನೆಯನ್ನು ಧ್ವಂಸ ಮಾಡಿ ಬಡಕುಟುಂಬವನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ವಿಟ್ಲ ಪಟ್ಟಣ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಮನೆ ಧ್ವಂಸ ಮಾಡಿದ್ದರಿಂದ ಮಕ್ಕಳು ಮರದಡಿಯಲ್ಲಿ ಮಲಗಿ ದಿನದೂಡುತ್ತಿದ್ದಾರೆ. ವಿಟ್ಲ ಪಟ್ಟಣ ಪಂಚಾಯಿತಿಗೆ ಮಾನವೀಯತೆ ಇಲ್ಲದಂತಾಗಿದೆ. ಬೇರೆ ಯಾವುದೇ ವ್ಯವಸ್ಥೆ ಮಾಡದೇ ಮನೆಯನ್ನು ನೆಲಸಮ ಮಾಡಿದ್ದಾರೆ. ಇದೊಂದು ರಾಕ್ಷಸಿ ಪ್ರವೃತ್ತಿಯಾಗಿದೆ. ಇವರ ನಡುವೆ ನಾವು ಬದುಕುತ್ತಿರುವುದು ನಮ್ಮ ದುರಂತವಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಸಿ‌ಐಟಿಯು ಮುಖಂಡ ರಾಮಣ್ಣ ವಿಟ್ಲ ಮಾತನಾಡಿ ಅವರು ವಿಟ್ಲ ಕಸಬಾ ಗ್ರಾಮದಲ್ಲಿ ವಾದಿರಾಜ ಅವರ ಮನೆಗೆ ಜ.9 ರಂದು ಸಂಜೆ ಮನೆಯವರಿಗೆ ಯಾವುದೇ ಮಾಹಿತಿ ನೀಡದೇ ಆಗಮಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಮನೆಯನ್ನು ನೆಲಸಮ ಮಾಡಿದ್ದಾರೆ. ಇದರಿಂದ ನಾಲ್ವರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮನೆಯಿಲ್ಲದೇ ತೊಂದರೆಯಾಗಿದೆ. ಮನೆ ಮಾಲೀಕ ಕೂಲಿ ಕೆಲಸ ಮಾಡಿ ತನ್ನ ಕುಟುಂಬವನ್ನು ಸಾಕುತ್ತಿದ್ದು, ಇದೀಗ ಇಡೀ ಕುಟುಂಬ ಬೀದಿ ಪಾಲಾಗಿದೆ ತಕ್ಷಣವೇ ಅವರಿಗೆ 2 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು, ವಿಟ್ಲ ಪಟ್ಟಣ ಪಂಚಾಯಿತಿ ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು ತಹಶೀಲ್ದಾರರ ಆದೇಶದಂತೆ ಮನೆಯನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಸಭೆ ಕರೆದ ಮಾತುಕತೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭ ಪಟ್ಟಣ ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಲತಾ ಅಶೋಕ್, ನಾಮನಿರ್ದೇಶಕ ಸದಸ್ಯ ಶಮೀರ್ ಪಳಿಕೆ, ಮಾಜಿ ಸದಸ್ಯರಾದ ಅಬ್ದುಲ್ ರಹಿಮಾನ್ ಕುರುಂಬಳ, ಸಂತೋಷ್ ಕುಮಾರ್, ವಿಕೆ‌ಎಂ ಅಶ್ರಫ್, ಸೋಮಪ್ಪ ಸುರುಳಿಮೂಲೆ, ರಾಘವೇಂದ್ರ ಸುರುಳಿಮೂಲೆ, ಇಬ್ರಾಹಿಂ ನೆಲ್ಲಿಗುಡ್ಡೆ, ಎಸ್.ಕೆ ಮಹಮ್ಮದ್ ಕಂಬಳಬೆಟ್ಟು, ಮೊದಲಾದವರು ಭಾಗವಹಿಸಿದ್ದರು.