Header Ads
Header Ads
Breaking News

ವಿಟ್ಲ ಪರಿಸರದಲ್ಲಿ ಕಲ್ಲಿನ ಕೋರೆಗಳ ಗುಂಡಿ ತುಂಬ ಮಳೆ ನೀರು, ಪುಟಾಣಿಗಳ ಪ್ರಾಣ ನುಂಗಲು ಕಾದು ಕುಳಿತಿರುವ ಅಪಾಯ


ಕಪ್ಪು ಕಲ್ಲಿನ ಕೋರೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ಜಿಲ್ಲೆಯಾದ್ಯಂತ ಹಲವು ಜೀವಗಳ ಬಲಿ ಸಂಭವಿಸುತ್ತಿದ್ದರೂ ಇಲಾಖೆಗಳು ಮಾತ್ರ ಇದುವರೆಗೂ ಅವುಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಂಡಿಲ್ಲ ಎಂಬುದಕ್ಕೆ ಉದಾಹರಣೆಯೊಂದು ಇಲ್ಲಿದೆ. ಇದು ಬೇರೆ ಯಾವುದೇ ಜಿಲ್ಲೆಯ ಕಥೆಯೆನಲ್ಲ. ಬುದ್ಧಿವಂತರ ಜಿಲ್ಲೆಯೆಂದು ಕರೆಯುವ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ದುಸ್ಥಿತಿ.
ಇಲಾಖಾಧಿಕಾಗಳ ಕುರುಡುತನದಿಂದಾಗಿ ಕಲ್ಲಿನ ಕೋರೆಗಳ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡ ಪರಿಣಾಮ ಪ್ರತಿನಿತ್ಯ ನೀರಿನಲ್ಲಿ ಆಟವಾಡುವ ಬಡ ಮಕ್ಕಳ ಬದುಕು ಮುಳುಗಿ ಹೋಗುವ ಹಂತಕ್ಕೆ ತಲುಪಿದೆ. ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ದರ್ಬೆಯಲ್ಲಿ ಮತ್ತು ಅಳಿಕೆ ಗ್ರಾಮದ ದರ್ಬೆಯಲ್ಲಿ ಎರಡು ಇಂತಹುದೇ ಮರಣ ಗುಂಡಿಗಳು ಯಾವುದೇ ಕ್ಷಣದಲ್ಲಿ ಬಡ ಕುಟುಂಬದ ಪುಟಾಣಿಗಳ ಪ್ರಾಣ ನುಂಗಲು ಕಾದು ಕುಳಿತಿವೆ. ರಜಾ ಸಿಕ್ಕಿದಾಕ್ಷಣ ಇಪ್ಪತೈದಕ್ಕೂ ಹೆಚ್ಚು ಪುಟಾಣಿಗಳು ಇದೇ ಕೋರೆಗಳಲ್ಲಿ ಈಜಾಟ ನಡೆಸುತ್ತಾ ತಲ್ಲೀನರಾಗುತ್ತಾರೆ. ವಿಟ್ಲ ಪರಿಸರದಲ್ಲಿ ಈ ಹಿಂದೆ ಹಲವು ಕಪ್ಪು ಕಲ್ಲಿನ ಕೋರೆಗಳು ಕಾರ್ಯಾಚರಿಸುತ್ತಿತ್ತು. ಅವುಗಳಲ್ಲಿ ಕೆಲವೊಂದು ಅಕ್ರಮ ಕೋರೆಗಳಾಗಿದೆ. ವಿಟ್ಲದ ಉಕ್ಕುಡ ಸಮೀಪ ಕೋರೆಗಳ ವಿರುದ್ಧ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು. ಅದರಂತೆ ದಾಳಿ ಕೂಡಾ ನಡೆಸಲಾಗಿತ್ತು. ಇದರಿಂದಾಗಿ ಬಹುತೇಕ ಕೋರೆಗಳ ಮಾಲಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸಿ ಜಾಗ ಖಾಲಿ ಮಾಡಿದ್ದರು. ಆದ್ರೆ ಕೋರೆಗಳಲ್ಲಿ ಪ್ರಪಾತ ನಿರ್ಮಾಣಗೊಂಡಿದ್ದರಿಂದ ಮಳೆಗಾಲದ ನೀರು ನಿಂತು ಕೆರೆ ನಿರ್ಮಾಣಗೊಂಡಿದೆ. ಇದರಿಂದ ಸ್ಥಳೀಯರ ನೆಮ್ಮದಿ ಹಾಳಾಗುತ್ತಿದೆ.
ಇದರ ಸುತ್ತಲಿನ ಪರಿಸರದಲ್ಲಿ ಬಡಪಾಯಿ ಜನರ ಮನೆಗಳಿವೆ. ಇಲ್ಲಿಯ ಮಕ್ಕಳು ಸೇರಿದಂತೆ ಯುವಕರು ಇಲ್ಲಿಗೆ ಬಂದು ಈಜಾಡುತ್ತಿದ್ದಾರೆ. ಇಪ್ಪತೈದು ಅಡಿಗಳಷ್ಟು ನೀರು ತುಂಬಿಕೊಂಡಿರುವ ಕಲ್ಲಿನ ಕೋರೆಗಳಲ್ಲಿ ಬಡ ಮಕ್ಕಳ ಪ್ರಾಣ ನೀಗುವ ಮೊದಲು ಇಲಾಖೆಗಳು ಮೃತ್ಯುಕೂಪಗಳಿಗೆ ಗತಿ ಕಾಣಿಸಬೇಕೆಂಬುದು ಇಲ್ಲಿನ ಜನ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಅವರು ಜಿಲ್ಲಾಡಳಿತಗಳು ಯಾವೊಂದು ಅನಾಹುತ ಸಂಭವಿಸಿದ ಬಳಿಕ ಎಚ್ಚರಗೊಳ್ಳುತ್ತಿದೆ. ಅನಾಹುತ ತಪ್ಪಿಸುವಲ್ಲಿ ಅದು ವಿಫಲವಾಗುತ್ತಿದೆ. ಇದರಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.

Related posts

Leave a Reply