Header Ads
Header Ads
Header Ads
Breaking News

ವಿಟ್ಲ ಪ.ಪಂ. ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕೋಳಿ ತ್ಯಾಜ್ಯ

ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆದು ಹೋಗುವ ಪರಿಣಾಮ ವಾಹನ ಚಾಲಕರು ಹಾಗೂ ಪಾದಚಾರಿಗಳು ಮೂಗುಮುಚ್ಚಿಕೊಂಡೆ ತೆರಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ವಿಟ್ಲ ಸಾಲೆತ್ತೂರು ರಸ್ತೆಯ ನೆತ್ರಕೆರೆ ಎಂಬಲ್ಲಿ ರಾಜಾರೋಷವಾಗಿ ಕೋಳಿ ತ್ಯಾಜ್ಯ ಎಸೆಯಲಾಗುತ್ತಿದೆ. ಇದರಿಂದ ಈ ಪರಿಸರ ಇಡೀ ದುರ್ನಾತ ಬೀರುತ್ತಿದೆ. ವಿಟ್ಲ ಪೇಟೆಯ ಕೆಲವು ಕೋಳಿ ಅಂಗಡಿಗಳ ಮಾಲಕರು ಕೋಳಿ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಯಾರೂ ಇಲ್ಲದ ಬಗ್ಗೆ ಖಾತರಿಪಡಿಸಿಕೊಂಡು ರಸ್ತೆ ಬದಿಯಲ್ಲಿ ಎಸೆದು ತಮ್ಮ ಪಾಡಿಗೆ ತೆರಳುತ್ತಿದ್ದಾರೆ. ಹೆಚ್ಚಾಗಿ ರಾತ್ರಿ ವೇಳೆ ಈ ಕೃತ್ಯ ಎಸೆಗುತ್ತಿದ್ದಾರೆ. ನೆತ್ರಕೆರೆ ಎಂಬಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ದೇವರಕಟ್ಟೆ ಕೂಡ ಇದೆ. ಇದರ ಸಮೀಪವೇ ಕೋಳಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಇಲ್ಲಿ ಎಸೆದು ಹೋಗಿರುವ ಕೋಳಿ ತ್ಯಾಜ್ಯಗಳ ಗೋಣಿ ಚೀಲವನ್ನು ಬೀದಿ ನಾಯಿಗಳು ಮನೆಗಳ, ದೇವಸ್ಥಾನಗಳ, ಅಂಗಡಿಗಳ ಬಳಿಕ ಹಾಕುತ್ತಿದೆ. ಅದಲ್ಲದೇ ರಸ್ತೆಯಲ್ಲಿ ತೆರಳುವ ಪಾದಚಾರಿಗಳು ಮೂಗುಮುಚ್ಚಿಕೊಂಡೆ ತೆರಳುತ್ತಿದ್ದಾರೆ. ಕೋಳಿ ತ್ಯಾಜ್ಯ ಗೋಣಿಚೀಲದ ಸುತ್ತಲೂ ನೊಣಗಳು ಉತ್ಪತ್ತಿಯಾಗಿದ್ದರಿಂದ ಮಾರಕ ರೋಗದ ಭೀತಿಯನ್ನು ಸಾರ್ವಜನಿಕರು ಎದುರಿಸುವಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರವಿಪ್ರಕಾಶ್ ಅವರು ಈ ಬಗ್ಗೆ ಸಂಬಂಧಪಟ್ಟವರಿಗೆ ಎಚ್ಚರಿಕೆ ಕೂಡ ನೀಡಲಾಗಿತ್ತು. ಆದರೆ ಇದೀಗ ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದಾರೆ. ಈ ಬಗ್ಗೆ ಪತ್ತೆ ಹಚ್ಚಿ ಅವರ ಅಂಗಡಿ ಪರವಾನಿಗೆಯನ್ನು ರದ್ದುಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ವಿಟ್ಲದ ಕಲ್ಲಕಟ್ಟ, ಕಾಶಿಮಠ, ಮಾಡತ್ತಡ್ಕ ಮೊದಲಾದ ಕಡೆಗಳಲ್ಲಿ ಇದೇ ರೀತಿ ಕೋಳಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿತ್ತು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತ ಪಟ್ಟಣ ಪಂಚಾಯಿತಿ ಕೋಳಿ ಅಂಗಡಿ ಮಾಲಕರ ಸಭೆ ಕರೆದು ಎಚ್ಚರಿಕೆ ನೀಡಿದ್ದಲ್ಲದೇ ನೋಟಿಸ್ ಕೂಡ ಜಾರಿ ಮಾಡಿದ್ದರು. ಅದಾದ ಬಳಿಕ ಕೆಲ ಕೆಲವು ತಿಂಗಳು ತ್ಯಾಜ್ಯ ಎಸೆಯುವ ಕಾರ್ಯ ಸ್ಥಗಿತಗೊಳಿಸಿದ್ದರು. ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿ ಹಾಗೂ ಪುತ್ತೂರು-ಕಾಸರಗೋಡು ರಸ್ತೆ ಬದಿಗಳಲ್ಲಿ ಅಕ್ರಮ ಕೋಳಿ ಸಾಗಾಟದ ಲಾರಿಗಳಿಂದ ಕೂಡಾ ಕೋಳಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿತ್ತು. ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದ್ದರಿಂದ ಅದು ನಿಂತುಕೊಂಡಿತ್ತು. ಇದೀಗ ಮತ್ತೆ ಈ ಕೃತ್ಯಗಳಿಗೆ ಇಳಿದಿರುವ ಕೋಳಿ ಅಂಗಡಿಯವರು ಈ ಬಗ್ಗೆ ಸ್ಥಳೀಯಾಡಳಿತ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply