Header Ads
Header Ads
Breaking News

ವಿಟ್ಲ: ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ

ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಶಿಬಿರಾರ್ಥಿಗಳಿಂದ ನಡೆದ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು.

ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಮಾಜ ಮತ್ತು ವಿದ್ಯಾರ್ಥಿಗಳನ್ನು ಎಚ್ಚರಿಸುವ ಬೀದಿ ನಾಟಕ ವ್ಯಸನಮುಕ್ತ ವಿದ್ಯಾರ್ಥಿ ಶಕ್ತಿ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿಗಳು ಬೀಡಿ, ಸಿಗರೇಟು, ಗಾಂಜಾಗಳನ್ನು ಸೇವಿಸುವ ಮತ್ತು ಓದಿಗಿಂತ ಮೋಜು ಲೇಸು ಎನ್ನುತ್ತ ಮಜಾ ಮಾಡಬೇಕೆನ್ನುವ ದೃಶ್ಯದಲ್ಲಿ ಕಾಣುತ್ತಾರೆ. ಆಗ ಓರ್ವ ಗೆಳೆಯ ಅವರಿಗೆ ಬದುಕು ಇಷ್ಟೇ ಅಲ್ಲವೆಂದು ಬೋಧಿಸುತ್ತಾನೆ. ಬದುಕೆಂದರೆ ಬರಿ ಮೋಜಲ್ಲ.. ಗೆಳೆಯರ ಸಂಗದಿ ದುಶ್ಚಟ ಕಲಿತು ವ್ಯರ್ಥಗೊಳಿಸುವ ಹೊತ್ತಲ್ಲ.. ಎಂಬ ಕನ್ನಡ ಉಪನ್ಯಾಸಕಿ ಬರೆದ ಹಾಡಿನ ಮೂಲಕ ಸಮಾಜ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ತಲುಪಿಸುತ್ತಾರೆ.

ಹಾಸ್ಯಭರಿತ, ವ್ಯಂಗ್ಯ ಟಾಂಗ್‌ಗಳು, ದುಃಖಭರಿತ ಸನ್ನಿವೇಶಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕೆಲ ದೃಶ್ಯಗಳು ಕೆಲವರ ಕಣ್ಣಲ್ಲಿ ನೀರು ಬರಿಸಿತು ಮತ್ತು ಕೆಲವರು ವಿದ್ಯಾರ್ಥಿಗಳ ಬಳಿ ತೆರಳಿ ಅಭಿನಂದಿಸಿದರು. ಅಮಲೇರಿದ ವ್ಯಕ್ತಿಯೊಬ್ಬರು ನಾಟಕವಾಡಿದ ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಸನ್ನಿವೇಶವೂ ಸೃಷ್ಟಿಯಾಯಿತು.

ಸಂತೋಷ್ ಮೂಡಬಿದಿರೆ ಮತ್ತು ಸಹಶಿಬಿರಾಧಿಕಾರಿ ಪ್ರವೀಣ್ ಪಿ. ನಿರ್ದೇಶಿಸಿದ್ದರು. ಗಂಗಾರತ್ನ ಮುಗುಳಿ ಅವರ ಸಾಹಿತ್ಯ, ಮುಖ್ಯ ಶಿಬಿರಾಧಿಕಾರಿ ಅಶೋಕ್ ಎಸ್. ಅವರ ಮಾರ್ಗದರ್ಶನವಿತ್ತು.

ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ, ಪ್ರಾಂಶುಪಾಲ ಡಾ. ಈಶ್ವರ ಪ್ರಸಾದ್, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸಹಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply