
ವಿಧಾನ ಪರಿಷತ್ನ ನೂತನ ಸಭಾಪತಿಯಾಗಿ ಜೆಡಿಎಸ್ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ಆಯ್ಕೆಯಾದರು.
ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಆರಂಭಿಸಿದ ಕಾಂಗ್ರೆಸ್ ಸದಸ್ಯರು, ಸೋಮವಾರ ಜಾನುವಾರು ಹತ್ಯೆ ನಿಷೇಧ ಮಸೂದೆಯ ಮೇಲೆ ಮತ ವಿಭಜನೆಗೆ ಆಗ್ರಹಿಸಿದ ತಮ್ಮ ಬೇಡಿಕೆಯನ್ನು ಪರಿಗಣಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು. ಸೋಮವಾರದ ಕಲಾಪದ ದೃಶ್ಯಾವಳಿ ಪರಿಶೀಲಿಸುವಂತೆ ಪಟ್ಟು ಹಿಡಿದರು. ಧರಣಿ ಕೈಬಿಟ್ಟು ಸಭಾಪತಿ ಚುನಾವಣೆ ಪ್ರಕ್ರಿಯೆ ನಡೆಸಲು ಸಹಕಾರ ನೀಡುವಂತೆ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮನವಿ ಮಾಡಿದರು. ಸೋಮವಾರದ ಘಟನೆಯ ಪರಿಶೀಲನೆಯ ಭರವಸೆ ನೀಡಿದರು.ಆದರೆ, ಕಾಂಗ್ರೆಸ್ ಸದಸ್ಯರು ಧರಣಿ ಹಿಂಪಡೆಯಲು ನಿರಾಕರಿಸಿದರು. ಧರಣಿ ನಡುವೆಯೇ ಉಪ ಸಭಾಪತಿ ಚುನಾವಣಾ ಪ್ರಕ್ರಿಯೆ ಆರಂಭಿಸಿದರು.ಜೆಡಿಎಸ್ ಸದಸ್ಯರಾದ ಕೆ.ವಿ. ನಾರಾಯಣಸ್ವಾಮಿ ಮತ್ತು ಎನ್. ಅಪ್ಪಾಜಿಗೌಡ ಅವರು ಹೊರಟ್ಟಿ ಅವರನ್ನು ಸಭಾಪತಿ ಹುದ್ದೆಗೆ ಆಯ್ಕೆ ಮಾಡುವಂತೆ ಪ್ರಸ್ತಾವ ಮಂಡಿಸಿದರು. ಜೆಡಿಎಸ್ ನ ಕೆ.ಟಿ. ಶ್ರೀಕಂಠೇಗೌಡ ಮತ್ತು ಕೆ.ಎ. ತಿಪ್ಪೇಸ್ವಾಮಿ ಅನುಮೋದಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದರು. ಆದರೆ, ಧರಣಿ ಮುಂದುವರಿಸಿದ ಕಾಂಗ್ರೆಸ್ ಸದಸ್ಯರು ಸಭಾಪತಿ ಚುನಾವಣೆಯಿಂದ ದೂರ ಉಳಿದರು.ಬಸವರಾಜ ಹೊರಟ್ಟಿ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಉಪ ಸಭಾಪತಿ ಘೋಷಿಸಿದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಇತರ ಸಚಿವರು ಹೊರಟ್ಟಿ ಅವರನ್ನು ಸಭಾಪತಿ ಪೀಠಕ್ಕೆ ಕರೆತಂದರು.ಬಸವರಾಜ ಹೊರಟ್ಟಿ ಅವರು ಏಳನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ದಶಕಗಳಿಂದ ಮೇಲ್ಮನೆಯ ಸದಸ್ಯರಾಗಿದ್ದಾರೆ