

ಮಂಗಳೂರಿನ ವೆಲೆನ್ಸಿಯಾದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ನೂತನ ಶಾಖೆ ಫೆಬ್ರವರಿ 17ರಂದು ಬೆಳಗ್ಗೆ 11.30ಕ್ಕೆ ಕದ್ರಿ ಕಂಬಳ ರಸ್ತೆಯಲ್ಲಿರುವ ವೆಂಚೂರ ಅಪಾರ್ಟ್ಮೆಂಟ್ ಬಳಿಯ ಅಕ್ಷಯ ಕಟ್ಟಡದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಚಿನ್ ನಡ್ಕ ತಿಳಿಸಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನೂತನ ಶಾಖೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ವಿಜೇತ, ಮಣಿಪಾಲ ವಿಶ್ವವಿದ್ಯಾನಿಲಯದ ಮಾಜಿ ವೈಸ್ ಚಾನ್ಸುಲರ್ ಡಾ. ಬಿ.ಎಂ. ಹೆಗ್ಡೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್, ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಕಾರ್ಪೋರೇಟರ್ ಸುಧೀರ್ ಶೆಟ್ಟಿ ಅವರು ಆಗಮಿಸಲಿದ್ದಾರೆ.
ವೇದಂ ಆರೋಗ್ಯ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹೆ ದೊರೆಯಲಿದ್ದು, ಎಲ್ಲಾ ರೀತಿಯ ಶಾಸ್ತ್ರೀಯ ಪಂಚಕರ್ಮ ಚಿಕಿತ್ಸೆ ದೊರೆಯಲಿದೆ. ಇದರೊಂದಿಗೆ ಸುಸಜ್ಜಿತ ಔಷಧ ಕೇಂದ್ರವೂ ಇದೆ. ಪುಷ್ಯ ನಕ್ಷತ್ರದಂದು ಆಯುರ್ವೇದ ಸ್ವರ್ಣಪ್ರಾಶನ ಇರಲಿದೆ. ಇಲ್ಲಿ ಆಯುರ್ವೇದ ಮಸಾಜ್ ಮತ್ತು ಪೇಶಿಯಲ್ ಸೌಲಭ್ಯ ದೊರೆಯಲಿದೆ. ಪ್ರತಿ ನಿತ್ಯ ಯೋಗ ಮತ್ತು ಪ್ರಾಣಾಯಮ ತರಬೇತಿ, ಆಹಾರ ಮತ್ತು ಜೀವಸತ್ವದ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹೆ ಲಭಿಸಲಿದೆ. ಅಲ್ಲದೆ ಪಕ್ಷಪಾತ, ಕುತ್ತಿಗೆ, ಸೊಂಟ ನೋವು, ಸಂದಿವಾತ ಮತ್ತು ಆಮವಾತ, ಸ್ಥೂಲತೆ ಮತ್ತು ತಲೆನೋವು ಹಾಗೂ ಮಾನಸಿಕ ರೋಗಕ್ಕೆ ವಿಶೇಷ ಪಂಚಕರ್ಮ ಚಿಕಿತ್ಸೆಗಳು ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಡಾ. ಅನುಷಾ ನಡ್ಕ ಉಪಸ್ಥಿತರಿದ್ದರು.