Header Ads
Breaking News

ವೈಭವದ ಮಂಗಳೂರು ದಸರಾ-2019 : ಶೋಭಾಯಾತ್ರೆಯ ಮೂಲಕ ಉತ್ಸವ ಸಂಪನ್ನ

ವಿಶ್ವ ವಿಖ್ಯಾತಿ ಪಡೆದಿರುವ ಮಂಗಳೂರು ದಸರಾ ವೈಭವೋಪೇತ ವಾಗಿ ಸಂಪನ್ನಗೊಂಡಿದೆ. ನವದುರ್ಗೆಯರು, ಶಾರದೆ ಸಹಿತ ಮೂರ್ತಿಗಳ ಶೋಭಾಯಾತ್ರೆ ಇಡೀ ಮಂಗಳೂರು ನಗರದಾದ್ಯಂತ ಸಂಚರಿಸಿ ಒಂಬತ್ತು ದಿನಗಳ ಸಂಭ್ರಮಕ್ಕೆ ತೆರೆ ಹಾಡಿದೆ.ಸಾಲು ಸಾಲು ಝಗಮಗಿಸುವ ದ್ವೀಪಗಳ ಸಾಲು, ಸರ್ವಾಲಂಕೃತ ವಾಹನದಲ್ಲಿ ಸಾಗಿ ಬರುವ ಶಾರದಾ ಮೂರ್ತಿ ಸಹಿತ ಮಂದಸ್ಮಿತ ನವದುರ್ಗೆಯರು, ಗಣಪತಿ, ತಾಸೆ ಪೆಟ್ಟಿಗೆ ಕುಣಿಯುವ ಹುಲಿ ವೇಷಧಾರಿಗಳ ತಂಡ, ವಿವಿಧ ಕಲಾ ತಂಡಗಳು, ಪೌರಾಣಿಕ ಕಥಾ ಪ್ರಪಂಚಕ್ಕೆ ಕೊಂಡೊಯ್ಯುವ ಸ್ತಬ್ಧಚಿತ್ರಗಳ ಸಾಲು, ದಾರಿಯುದ್ದಕ್ಕೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು….ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿದ್ದ ಮಂಗಳೂರು ದಸರಾ ವೈಭವ ಸಂಭ್ರಮದ ತೆರೆ ಕಂಡಿದ್ದು ಈ ರೀತಿ… ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮಂಗಳೂರು ದಸರಾ ವೈಭವದದಿಂದ ಸಂಪನ್ನಗೊಂಡಿದೆ. ಅಲಂಕೃತ ವಾಹನದಲ್ಲಿ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾರ್ಯದಾಯಿನ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ ಮತ್ತು ಆದಿಶಕ್ತಿ ಯರೊಂದಿಗೆ ಶಾರದಾ ಮಾತೆ ಮತ್ತು ನಾರಾಯಣ ಗುರುಗಳ ಮೂರ್ತಿಗಳ ಅದ್ಧೂರಿ ಮೆರವಣಿಗೆ ನಡೆದಿದೆ..ಸುಮಾರು 9 ಕಿ.ಮೀ ಸಾಗುವ ಮೆರವಣಿಗೆ ನಾಳೆ ಮುಂಜಾನೆ ವೇಳೆಗೆ ಕೊನೆಗೊಳ್ಳಲಿದೆ. ಸುಮಾರು 75 ಕ್ಕೂ ಹೆಚ್ಚು ಸ್ತಬ್ಥ ಚಿತ್ರಗಳನ್ನೊಳಗೊಂಡ ಶೋಭಾಯಾತ್ರೆ ಗೆ ಲಕ್ಷಾಂತರ ಜನ ಸಾಕ್ಷಿಯಾಗಿದ್ದಾರೆ..ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚಿಸಿಕೊಳ್ಳುತ್ತಿರುವ ಮಂಗಳೂರು ದಸರಾದ ಮೆರವಣಿಗೆ ಈ ಬಾರಿಯೂ ಜನತೆ ಸಂಭ್ರಮ ಸಡಗರಗಳಿಂದ ಪಾಲ್ಗೊಳ್ಳುವಂತೆ ಮಾಡಿದೆ. ಮೆರವಣಿಗೆ ಸಾಗಿ ಬರುವ ಬೀದಿಗಳೆಲ್ಲವೂ ವರ್ಣರಂಜಿತ ಚಿಕಣಿ ದೀಪಗಳಿಂದ ಸ್ವರ್ಗವೇ ಧರೆಗಿಳಿದಂತೆ ಭಾಸವಾಗಿದೆ.ಮೆರವಣಿಗೆಯಲ್ಲಿ ಸಾಲುಸಾಲು ಕೇರಳ ಶೈಲಿ ಕೊಡೆಗಳು, ವಿವಿಧ ಬೊಂಬೆಗಳು, ಕರ್ನಾಟಕದ ಜಾನಪದ ವೈವಿಧ್ಯ ಸಾರುವ ಡೊಳ್ಳುಕುಣಿತ, ನರ್ತನಗಳೊಂದಿಗೆ ಕೇರಳ ಚೆಂಡೆ, ಸ್ಥಳೀಯ ಚೆಂಡೆಗಳು, ಲಾರಿ ತುಂಬ ಕೇಕೆ ಹಾಕುವ ಹುಲಿವೇಷಗಳು, ಪುರಾಣ ಕತೆಗಳ ಸಂದರ್ಭಗಳನ್ನು ವ್ಯಕ್ತಪಡಿಸುವ 75ಕ್ಕೂ ಹೆಚ್ಚು ಸ್ತಬ್ಧಚಿತ್ರ, ಬ್ಯಾಂಡ್‍ಸೆಟ್‍ಗಳು ಮೆರವಣಿಗೆಯ ಹುರುಪು ಹೆಚ್ಚಿಸಿದವು. ಅದರಲ್ಲೂ ಪದುವಾ ಫ್ರೆಂಡ್ಸ್ ವತಿಯಿಂದ ಅಂಬಾರಿ- ರಾಜಮನೆತನದ ದೃಶ್ಯವೊಂದಿಗೆ ಮೈಸೂರು ದಸರಾ ವೈಭವ ಪ್ರಸ್ತುತಪಡಿಸಿದ ಸ್ಥಬ್ತ ಚಿತ್ರ ಆಕರ್ಷಣೆಯಾಗಿತು.
ಇನ್ನು ಮೆರವಣಿಗೆಯಲ್ಲಿ ಸೇರಿದವರಲ್ಲದೆ ಇಕ್ಕೆಲಗಳಲ್ಲಿರುವ ಕಟ್ಟಡಗಳ ಮೇಲೂ ಜನ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.

ಮಂಗಳೂರು ದಸರಾ ಮೆರವಣಿಗೆಯಲ್ಲಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಶಾರದೆ, ಗಣಪತಿ ಸಹಿತ ನವದುರ್ಗೆಯರನ್ನು ಹೊತ್ತ ಟ್ರಕ್‍ಗಳಿಗೆ ಮೆರವಣಿಗೆಯಲ್ಲಿ ಈ ಬಾರಿ ಮೊದಲ ಅವಕಾಶ ನೀಡಲಾಗಿತ್ತು. ಒಟ್ಟಿನಲ್ಲಿ ಕಳೆದ ಒಂಭತ್ತು ದಿನಗಳಲ್ಲಿ ನಡೆದ 28 ನೇ ವರ್ಷದ ವೈಭವದ ಮಂಗಳೂರು ದಸರಾ ತೆರೆ ಕೊಂಡಿದೆ..ಲಕ್ಷ ಲಕ್ಷ ಜನ ದಸರಾ ವೈಭವವನ್ನು ಕಣ್ತುಂಬಿಕೊಂಡು ಕೃತಾರ್ಥರಾದರು.

Related posts

Leave a Reply

Your email address will not be published. Required fields are marked *