Breaking News

ಶಾಂತಿಗಾಗಿ ಯುವಕರು ಆಟೋಟಗಳಲ್ಲಿ ಈಡುಗೊಳ್ಳಿ, ಕಲ್ಲಡ್ಕ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಗದೀಶ್


ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯದಲ್ಲೇ ಉತ್ತಮ ಹೆಸರಿದೆ. ಬೆರಳೆಣಿಕೆಷ್ಟು ಜನರಿಂದಾಗಿ ಜಿಲ್ಲೆಯಲ್ಲಿ ಭಯದ ವಾತವರಣ ನಿರ್ಮಾಣವಾಗುತ್ತಿದೆ. ಕೇವಲ ಸಿಸಿ ಟಿವಿ ಅಳವಡಿಸುವುದರಿಂದ ಹಾಗೂ ಪೊಲಿಸರಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಎರಡೂ ಸಮುದಾಯದ ಹಿರಿಯ ಮುಖಂಡರು ಯುವ ಜನರನ್ನು ಸರಿದಾರಿಗೆ ತಂದು ಕೋಮು ಸೌಹಾರ್ದತೆಯ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಜಗದೀಶ್ ಹೇಳಿದರು.
ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಲಡ್ಕದಂತ ಗ್ರಾಮೀಣ ಭಾಗದಲ್ಲೂ ಎರಡೂ ಸಮುದಾಯದಲ್ಲಿ ಬುದ್ದಿವಂತ, ಸಾಮಾಜಿಕ ಜವಾಬ್ದಾರಿವುಳ್ಳ ಮಹನಿಯರಿದ್ದಾರೆ. ಯಾವುದೇ ಅಹಿತಕರ ಘಟನೆಗಳಾದ ತಕ್ಷಣ ಎರಡೂ ಸಮುದಾಯದ ಮುಖಂಡರು ಅಥವಾ ಹಿರಿಯರು ಸೇರಿಕೊಂಡು ಪರಿಸ್ಥಿತಿ ಉಲ್ಬಣವಾಗದಂತೆ ಪ್ರಯತ್ನಿಸಬೇಕು ಎಂದರು. ಘಟನೆಗೆ ಮೂಲ ಕಾರಣಕರ್ತರಾದವರನ್ನು ಕೂಡಾ ಕಾನೂನಿನ ಕೈಗೆ ಒಪ್ಪಿಸಬೇಕು ಎಂದ ಅವರು, ಕಲ್ಲಡ್ಕದಲ್ಲಿ ಮತ್ತೆ ಕೋಮು ಸೌಹಾರ್ದತೆ ಮರುಸ್ಥಾಪಿಸುವ ನಿಟ್ಟಿನಲ್ಲಿ ಕ್ರೀಡಾಕೂಟ, ವಿವಿಧ ಕಾರ್ಯಕ್ರಮಗಳನ್ನು ಎರಡೂ ಸಮುದಾಯದ ಪ್ರಮುಖರು ಒಟ್ಟು ಸೇರಿ ರೂಪಿಸಬೇಕು. ಇದರಲ್ಲಿ ತಾವು ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಹೇಳಿದರು.
ಘಟನೆಗೆ ಸಂಬಂದಿಸಿ ಉಭಯ ಕೋಮುಗಳಿಂದಲೂ ಅಮಾಯಕರನ್ನು ಬಂಧಿಸಲಾಗಿದೆ ಎಂದು ಸಭೆಯಿಂದ ಕೇಳಿ ಬಂದ ಬಹುತೇಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಘಟನೆ ನಡೆದ ಕೂಡಲೇ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವುದು, ಗಡುವು ನೀಡುವುದರಿಂದ ಅಮಾಯಕ ಬಂಧನವಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ತನಿಖೆ ನಡೆಸಿ ನೈಜ್ಯ ಆರೋಪಿಗಳನ್ನು ಬಂಧಿಸುವವರೆ ತಾಳ್ಮೆ ವಹಿಸಬೇಕಾಗುತ್ತದೆ ಎಂದಾಗ ಸಭೆ ಇದಕ್ಕೆ ಸಹಮತ ವ್ಯಕ್ತಪಡಿಸಿತು. ಘಟನೆಯ ಸಂದರ್ಭಗಳಲ್ಲಿ ಇಲಾಖಾ ವತಿಯಿಂದ ಲೋಪಗಳು ಆಗಿದ್ದಲ್ಲಿ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಲಾಗುವುದು. ಇಲ್ಲಿ ಬಂದಿರುವ ಎಲ್ಲ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪೊಲೀಸ್ ಹೊರ ಠಾಣೆಯನ್ನು ಬಸ್ ತಂಗುದಾಣದ ಮೇಲ್ಬಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅನುದಾನ ಒದಗಿಸಲಾಗುವುದು ಎಂದ ಅವರು, ಒಟ್ಟಾರೆಯಾಗಿ ಕಲ್ಲಡ್ಕದಲ್ಲಿ ಶಾಂತಿ ಮರುಸ್ಥಾಪಿಸಲು ಇಲ್ಲಿನ ನಾಗರಿಕರು ಸಹಕರಿಸಬೇಕೆಂದು ಕೋರಿದರು.
ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ ಮತ್ತು ಕೆ. ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಪ್ರಭಾಕರ ಭಟ್, ಅಬುಬಕ್ಕರ್ ಸಿದ್ದೀಕ್, ಇದಿನಬ್ಬ, ಪದ್ಮನಾಭ ರೈ, ವಜ್ರನಾಥ ಕಲ್ಲಡ್ಕ, ಹನೀಫ್ ಅಹಮ್ಮದ್, ಪಂಚಾಯತ್ ಸದಸ್ಯ ಗೋಪಾಲ ಪೂಜಾರಿ, ಶೆರೀಫ್, ಆಯಿಷಾ ಮತ್ತು ಶಾಫಿ ಮಾತನಾಡಿ ವಿವಿಧ ವಿಷಯಗಳ ಕುರಿತು ಗಮನ ಸೆಳೆದರು. ಆಯಿಷಾ ಮಾತನಾಡಿ, ಪೊಲೀಸರು ತನಿಖೆಯ ನೆಪದಲ್ಲಿ ಮನೆಯೊಳಗೆ ನುಗ್ಗಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ಆಪಾದಿಸಿದರು. ಡಿವೈಎಸ್ಪಿ ಭಾಸ್ಕರ ರೈ, ಎಸ್ಪಿ ಕಚೇರಿಸಿ ಸಿಐ ಕೃಷ್ಣಯ್ಯ, ಬಂಟ್ವಾಳ ನಗರ ಠಾಣಾ ಎಸೈ ರಕ್ಷಿತ್ ಎ.ಕೆ. ಹಾಜರಿದ್ದರು.

Related posts

Leave a Reply