Header Ads
Breaking News

ಶಾಲಾ ಶಿಕ್ಷಕರಿಂದ ಗ್ರಾ.ಪಂ ಸದಸ್ಯರಿಗೆ ಅವಮಾನ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಪುತ್ತೂರು: ಕಳೆದ ಸಪ್ಟಂಬರ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೋಳ್ಪಾಡಿ ಗ್ರಾಮದ ಗಾಣಂತಿ ಹಿ.ಪ್ರಾ ಶಾಲಾ ಸಹ ಶಿಕ್ಷಕ ಜಯಂತ್ ವೈಯವರು ಗ್ರಾ.ಪಂ ಸದಸ್ಯರಿಗೆ ಅವಮಾನ ಮಾಡಿದ್ದಾರೆ ಮತ್ತು ಎಸ್‌ಡಿಎಂಸಿ ಖಾತೆಯ ಹಣವನ್ನು ದುರುಪಯೋಗ ಪಡಿಸಿದ್ದಾರೆ ಎಂದು ಆರೋಪಿಸಿ ಶಾಲಾ ಎಸ್‌ಡಿಎಂಸಿಯವರು ಹಾಗೂ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ತಕ್ಷಣ ಹುದ್ದೆಯಿಂದ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.ಇಡ್ಯಡ್ಕ ಶಾಲೆಯಲ್ಲಿ ಸಹ ಶಿಕ್ಷಕ, ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಂತ ವೈಯವರು ನಿಯೋಜನೆಯಲ್ಲಿ ದೋಳ್ಪಾಡಿ ಗಾಣಂತಿ ಹಿ.ಪ್ರಾ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಕಾಣಿಯೂರು ಗ್ರಾ.ಪಂ ಸದಸ್ಯ ಗಣೇಶ್ ಉದನಡ್ಕರವರಿಗೆ ಅಗೌರವ ತೋರಿದ್ದಾರೆ. ಅಲ್ಲದೆ ಶಾಲಾ ಎಸ್‌ಡಿಎಂಸಿ ಖಾತೆಯ ಹಣವನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ತಾವು ನೀಡಿದ ದೂರಿಗೆ ಇಲಾಖೆಯಿಂದ ಯಾವುದೇ ಸ್ಪಂಧನೆ ದೊರೆಯದಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕಛೇರಿಗೆ ಮುತ್ತಿಗೆ ಹಾಕಿದರು.

ಸ್ಥಳಕ್ಕೆ ಉಪನಿರ್ದೇಶಕರು ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಅವರು ಶಿಕ್ಷಕ ಜಯಂತರವರನ್ನು ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದು ಸಂಜೆ ತನಕ ಪ್ರತಿಭಟನೆ ನಡೆಸಿದರು. ಅಮಾನತುಗೊಳಿಸದಿದ್ದರೆ ಕಛೇರಿಗೆ ಬೀಗ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಸಂಜೆ 4 ಗಂಟೆಯ ವೇಳೆಗೆ ಜಿಲ್ಲಾ ಉಪನಿರ್ದೇಶಕರಿಂದ ಬಂದ ಅಮಾನತು ಆದೇಶವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್‌ರವರು ಓದಿ ಹೇಳಿದ ಬಳಿಕ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.

ಮಧ್ಯಾಹ್ನ 2ಗಂಟೆಯ ವೇಳೆಗೆ ಸಮಗ್ರ ಶಿಕ್ಷಣ ಉಪಯೋಜನಾ ಸಮಯ್ವನಾಧಿಕಾರಿ ಮಂಜುಳಾರವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ಪಡೆದರು. ಗ್ರಾ.ಪಂ ಸದಸ್ಯ ಗಣೇಶ್ ಉದನಡ್ಕ ಘಟನೆಯ ಬಗ್ಗೆ ಸಮನ್ವಯಾಧಿಕಾರಿಯವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ಸಮನ್ವಯಾಧಿಕಾರಿಗಳು ದೂರವಾಣಿ ಮೂಲಕ ಜಿಲ್ಲಾ ಉಪನಿರ್ದೇಶಕರಿಗೆ ಘಟನೆಯ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಶಾಲಾ ಎಸ್‌ಡಿಎಂಸಿ ಖಾತೆಯಿಂದ ಹಣ ದುರುಪಯೋಗ ಪಡಿಸಿರುವ ಬಗ್ಗೆ ಆ.19ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ. ಹಾಗಿದ್ದರೂ ಒಬ್ಬ ಭ್ರಷ್ಟಾಚಾರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ. ನಾವು ನೀಡಿದ ದೂರಿನ ಪ್ರತಿಯನ್ನು ಮೇಲಾಧಿಕಾರಿಗಳಿಗೆ ವರದಿ ಮಾಡದೇ ಇಲಾಖೆಯ ಅಧಿಕಾರಿಗಳೇ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಕಾರರು ಶಿಕ್ಷಕ ಜಯಂತ ವೈಯವರಿಗೆ ನೀಡಿದ ಜಿಲ್ಲಾ ಅತ್ಯುತ್ತಮ ಪ್ರಶಸ್ತಿಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಜರಂಗಳದಳ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಸೇರಿದಂತೆ ಸುಮಾರು 250ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Related posts

Leave a Reply

Your email address will not be published. Required fields are marked *