Header Ads
Breaking News

ಶಾಲೆ- ಮೆಸ್ಕಾಂ ಎಟಿಪಿಗೆ ಕಳ್ಳರ ಲಗ್ಗೆ: ಸಾವಿರಾರು ನಗದು ಕಳವು

ಉಳ್ಳಾಲ: ಇಲ್ಲಿನ ಮಾಸ್ತಿಕಟ್ಟೆ ಯಲ್ಲಿರುವ ಶಾಲೆಗೆ ನುಗ್ಗಿದ ಕಳ್ಳರು ರೂ.25,000 ಹಾಗೂ ಕೋಟೆಕಾರು ಮೆಸ್ಕಾಂ ಘಟಕಕ್ಕೆ ಸೇರಿದ ಎಟಿಪಿ ಯಂತ್ರ ಒಡೆದು ರೂ.60,000 ನಗದು ಕಳವು ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆ ನ ಒಳಗೆ ನಡೆದಿದೆ. ಭಾರತ್ ಪ್ರೌಢಶಾಲೆ ಹಾಗೂ ಕಾಲೇಜಿನ ಕಟ್ಟಡದ ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು 15 ರಷ್ಟು ಕಪಾಟುಗಳನ್ನು ಮುರಿದು, ಹುಡುಕಾಡಿದ್ದಾರೆ. ಈ ವೇಳೆ ಪಿಯುಸಿ ಕಾಲೇಜು ಕಪಾಟಿನಲ್ಲಿರಿಸಿದ್ದ, ವಿದ್ಯಾರ್ಥಿಗಳಿಗೆಂದು ಕಾಲೇಜು ಆಡಳಿತ ಸಮಿತಿ ನೀಡಿದ್ದ ರೂ.25,000 ಕಳವು ನಡೆಸಿದೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾದರೂ, ಒಂದು ಸಿಸಿಟಿವಿಗೆ ಸೇರಿದ ಡಿವಿ ಆರ್ ಅನ್ನು ಕಳವು ನಡೆಸಿದ್ದಾರೆ. ಆದರೂ ಸಂಸ್ಥೆಯ ಒಂದು ಸಿಸಿ ಟಿವಿಯಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಇಬ್ಬರು ಯುವಕರು ಹೆಲ್ಮೆಟ್ ಧರಿಸಿ ಕೃತ್ಯದಲ್ಲಿ ಭಾಗಿಯಾಗಿರುವುದು ಸೆರೆಯಾಗಿದೆ. ಈ ಪೈಕಿ ಓರ್ವನ ಚಹರೆ ಗುರುತಿಸುವಿಕೆ ಸಾಧ್ಯವಾಗಿದೆ. ವೀಡಿಯೋ ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವರ್ಷ ಕಳೆಯುವುದರೊಳಗೆ ಮತ್ತೆ ಕಳವು:
ಕೋಟೆಕಾರು ವಾಣಿ ಹಾಡ್ 9 ವೇರ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿರುವ ಮೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ ಸಂಗ್ರಹಿಸುವ ಖಾಸಗಿ ಗುತ್ತಿಗೆಯಡಿ ಕಾರ್ಯಾಚರಿಸುವ ಎಟಿಪಿ ಯಂತ್ರದಿಂದ ವರ್ಷ ಕಳೆಯುವುದರ ಒಳಗೆ ಎರಡನೇ ಬಾರಿ ಕಳವು ನಡೆದಿದೆ. ಕಳೆದ ಎಪ್ರಿಲ್ ತಿಂಗಳ ಅವಧಿಯಲ್ಲಿ ಗ್ರಾಹಕರಿಂದ ಸಂಗ್ರಹಿಸಲಾಗಿದ್ದ ರೂ.1 ಲಕ್ಷಕ್ಕೂ ಅಧಿಕ ನಗದು ಕಳ್ಳರು ಯಂತ್ರ ಮುರಿದು ದೋಚಿದ್ದರು. ಇದೀಗ ಮತ್ತೆ ಅದೇ ಯಂತ್ರದಿಂದ ರೂ.60,000 ನಗದು ಕಳವು ನಡೆಸಲಾಗಿದೆ. ಹಿಂದಿನ ಪ್ರಕರಣದಿಂದಲೂ ಎಚ್ಚೆತ್ತುಕೊಳ್ಳದ ಗುತ್ತಿಗೆ ವಹಿಸಿಕೊಂಡ ಖಾಸಗಿ ಸಂಸ್ಥೆ , ಸಿಸಿಟಿವಿಯಂತಹ ಮುಂಜಾಗ್ರತಾ ಕ್ರಮ ವಹಿಸದೆ ಇರುವುದರಿಂದ ಕೃತ್ಯ ನಡೆದಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬಂತು. ಕೃತ್ಯದಲ್ಲಿ ಆರು ಜನರು ಭಾಗಿಯಾಗಿದ್ದರು ಹಾಗೂ ಒಂದು ವಾರದಿಂದ ರಿಕ್ಷಾ ವೊಂದು ರಾತ್ರಿ ಹೊತ್ತಿನಲ್ಲಿ ತಿರುಗಾಡುತ್ತಿತ್ತು ಅನ್ನುವ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *