Header Ads
Breaking News

ಶಿಕ್ಷಣ ಸುಧಾರಣೆ ಕಾರಣ ಯಕ್ಷರ ಕರಾಮತ್ತು : ವರ್ಷಂಪ್ರತಿ ಸಾವಿರಕ್ಕೂ ಅಧಿಕ ಯಕ್ಷ ಕಿಶೋರರು

ನಲಿಕಲಿ ಅನ್ನುತ್ತೆ ಸರ್ಕಾರ, ಆದ್ರೆ ಬೆನ್ನಿನ ಮೇಲೆ ಹೊರಲಾದಷ್ಟು  ಭಾರದ ಚೀಲಗಳನ್ನು ಹಾಕಿ, ಮನೆಯಲ್ಲಿ ರಾಶಿ ರಾಶಿ ಹೋಂವರ್ಕ್ ಕೊಟ್ಟು. ಪುಟ್ಟ ಮಕ್ಕಳಿಗೆ ಅಟವಾಡೋದಕ್ಕೂ ಸಮಯವಿಲ್ಲದಂತಾಗಿದೆ. ಅಂತಾದ್ದರಲ್ಲಿ ಕುಣಿಯುತ್ತಾ ಕಲಿಯುವ ಮತ್ತು ಸುಲಭವಾಗಿ ಉತ್ತಮ ಫಲಿತಾಂಶ ಪಡೆಯುವ ಸೂತ್ರವೊಂದು ಉಡುಪಿಯ ಮಕ್ಕಳಿಗೆ ಕರತಲಾಮಲಕವಾಗಿದೆ. ಏನದು ಬನ್ನೀ ನೊಡೋಣ..

ಅವರೇನು ದೇವಲೋಕದಿಂದ ಧರೆಗಿಳಿದ ಯಕ್ಷರೋ, ಇಲ್ಲಾ ಗಂಧರ್ವರೋ ಎಂದು ಭಾಸವಾಗುತ್ತೆ. ಹಾವಭಾವ, ಹೆಜ್ಜೆ ಗೆಜ್ಜೆ, ವೇಷ ಭೂಷಣಗಳಂತೂ ಕಣ್ಮನ ಸೆಳೆಯುತ್ತೆ. ಇವರೆಲ್ಲಾ ಉಡುಪಿಯ ಹೈಸ್ಕೂಲ್ ವಿದ್ಯಾರ್ಥಿಗಳು. ಪಾಠ ಕೇಳಬೇಕಾದ ಮಕ್ಕಳು ಬಯಲಾಟ ಮಾಡೋಕೆ ಹೊರಟಿದ್ದಾರೆ ಅಂದ್ಕೊಂಡ್ರಾ, ಹೌದು ಈ ಯಕ್ಷ ಕಿಶೋರರು ಒಂದು ಅದ್ಬುತ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ವೃತ್ತಿಪರ ಕಲಾವಿದರಿಗೂ ಸರಿಸಾಟಿಯಾಗುವಂತಹಾ ಪ್ರದರ್ಶನ ನೀಡುತ್ತಿದ್ದಾರೆ. ಇನ್ನೂ ಮೀಸೆ ಮೂಡದ ಪ್ರಾಯದಲ್ಲಿ ಭೀಮ, ಧುರ್ಯೋಧನರಾಗಿ ತೊಡೆತಟ್ಟುತ್ತಿದ್ದಾರೆ. ಊರಿನ ಮಕ್ಕಳೆಲ್ಲಾ ಗಣಿತದ ಪಾಠದಲ್ಲಿ ಮುಳುಗಿರುವಾಗ ಇವರು  ಚಾಣಾಕ್ಷ ನಡೆಗಳನ್ನು ರೂಢಿಸಿಕೊಂಡಿದ್ದಾರೆ. ಕನ್ನಡ ಪಾಠ ಬೋರು ಅಂತ ಬೇರೆ ಮಕ್ಕಳು ತಲೆ ಕೆಡಸಿಕೊಂಡರೆ, ಇಲ್ಲಿ ಪೌರಾಣಿಕ ಪಾತ್ರಗಳಾಗಿ ಓತಪ್ರೋತ ಕನ್ನಡ ಸಂಭಾಣೆಗಳನ್ನು ಉಚ್ಛರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲೇ ಇದೊಂದು ಅಪರೂಪದ ಪ್ರಯೋಗ; ಸಂಸ್ಕೃತಿಯ ಮೂಲಕ ಶಿಕ್ಷಣ ನೀಡುವ ಪ್ರಯತ್ನ ಉಡುಪಿಯಲ್ಲಿ ನಡೆದಿದೆ. ಉಡುಪಿ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಹೈಸ್ಕೂಲುಗಳಲ್ಲಿ ಯಕ್ಷಶಿಕ್ಷಣ ನೀಡಲಾಗುತ್ತಿದೆ. ಈ ವರ್ಷ ಸಾವಿರದ ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಬುದ್ಧ ಕಲಾವಿದರಾಗಿ ರೂಪುಗೊಂಡಿದ್ದಾರೆ. ಐವತ್ತಕ್ಕೂ ಅಧಿಕ ವಿದ್ಯಾರ್ಥಿತಂಡಗಳು ಸುಧೀರ್ಘ ನೂರು ಗಂಟೆಗಳ ಯಕ್ಷಗಾನ ಪ್ರದರ್ಶನ ನೀಡುತ್ತಿವೆ.ಶಿಕ್ಷಣದಲ್ಲಿ ಉಡುಪಿ ನಂಬರ್ ವನ್, ಇದಕ್ಕೆ ಕಾರಣ ಏನು ಅಂತ ಸಂಶೋಧನೆಗೆ ಹೊರಟವರಿಗೆ ಈ ಯಕ್ಷಶಿಕ್ಷಣದ ಗುಟ್ಟು ತಿಳಿಯುತ್ತೆ. ಎಲ್ಲಾ ಪ್ರೌಢಶಾಲೆಗಳಲ್ಲೂ ತರಗತಿ ಮುಗಿದ ನಂತರ ಯಕ್ಷಗಾನವನ್ನು ವಿಶೇಷ ಪಠ್ಯವಾಗಿ ಕಲಿಸಲಾಗುತ್ತಿದೆ. ರಾಜ್ಯದಲ್ಲೇ ಪ್ರಥಮವಾಗಿ ಈ ಪ್ರಯೋಗ ನಡೆದಿದೆ. ಸುಮಾರು ೩೦ ಕ್ಕೂ ಅಧಿಕ ಯಕ್ಷಗಾನ ಶಿಕ್ಷಕರು, ಸಾವಿರದ ಐನೂರಕ್ಕೂ ಅಧಿಕ ಮಕ್ಕಳಿಗೆ ವರ್ಷಂಪ್ರತಿ ಯಕ್ಷಗಾನ ಕಲಿಸುತ್ತಿದ್ದಾರೆ. ಇದು ಮಕ್ಕಳ ಕಲಿಕೆಯ ಮೇಲೆ ಅಚ್ಚರಿಯ ಪರಿಣಾಮ ಭೀರಿದೆ. ಎರಡು ತಾಸಿನ ಪ್ರಬುದ್ಧ ಪ್ರದರ್ಶನ ನೀಡುವಷ್ಟರ ಮಟ್ಟಿಗೆ ವಿದ್ಯಾರ್ಥಿಗಳು ತಯಾರಾಗಿದ್ದಾರೆ. ಜಾತಿ ಮತ, ಲಿಂಗ ಬೇಧವಿಲ್ಲದೆ ಎಲ್ಲಾ ವರ್ಗದ, ಎಲ್ಲಾ ಧರ್ಮದ ವಿದ್ಯಾರ್ಥಿಗಳು ಈ ಪಾರಂಪರಿಕ ಕಲೆಯನ್ನು ಅಭ್ಯಾಸ ಮಾಡುತ್ತಾರೆ.ಇಂಗ್ಲೀಷ್ ಮಿಡಿಯಂ ಮಕ್ಕಳಿಗೂ ಕನ್ನಡದ ಸಂಭಾಷಣೆಗಳನ್ನು ಅಸ್ಕಲಿತವಾಗಿ ಉಚ್ಛರಿಸುವ ಭಾಷಶುದ್ಧಿ ಬಂದಿದೆ.ಈವರಗೆ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆದಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೂ ಯಕ್ಷಗಾನ ಕಲಿಕೆ ಪೂರಕ ಪರಿಣಾಮ ಭೀರಿದ್ದು ಈ ಸಾಂಸ್ಕೃತಿಕ ಅಭಿಯಾನದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Related posts

Leave a Reply

Your email address will not be published. Required fields are marked *