Header Ads
Breaking News

ಶೋಭಾ ಕರಂದ್ಲಾಜೆ ಹೇಳಿಕೆಗೆ ಸಚಿವ ನಾಡಗೌಡ ತಿರುಗೇಟು

ಕುಂದಾಪುರ: ಮೀನುಗಾರರ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಕೈಚೆಲ್ಲಿ ಕೂತಿದೆ ಎಂದು ಹೇಳಿಕೆ ನೀಡುವ ಶೋಭಾ ಕರಂದ್ಲಾಜೆಯವರಿಗೆ ನಾಚಿಕೆಯಾಗಬೇಕು. ನಾನು ಮತ್ತು ಗೃಹ ಸಚಿವರು ನಾಪತ್ತೆಯಾದ ಮೀನುಗಾರರ ಮನೆಗೆ ಹೋಗಿ ಸಾಂತ್ವಾನ ಹೇಳಿದ್ದೇವೆ. ಈ ಬಗ್ಗೆ ಕೇಂದ್ರಕ್ಕೂ ಪತ್ರ ಬರೆದಿದ್ದೇವೆ. ಶೋಭಾ ಕರಂದ್ಲಾಜೆ ಬಹಿರಂಗ ಚರ್ಚೆಗೆ ಬರಲಿ. ಮೀನುಗಾರರ ನಾಪತ್ತೆ ವಿಚಾರದಲ್ಲಿ ರಾಜ್ಯ ಸರ್ಕಾರ ಎಷ್ಟು ಕೆಲಸ ಮಾಡಿದೆ ಎಂದು ದಾಖಲೆ ಸಹಿತ ಉತ್ತರ ಕೊಡುತ್ತೇನೆ ಎಂದು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಗುಡುಗಿದ್ದಾರೆ. ಗಂಗೊಳ್ಳಿಯ ರೆಬೆರೋ ಕಾಂಪ್ಲೆಕ್ಸ್‌ನಲ್ಲಿ ಮೀನುಗಾರ ಮುಖಂಡರ ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿ ಸಂಸದರು ಆಯ್ಕೆಯಾದ ಕ್ಷೇತ್ರದಲ್ಲೇ ಐವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಭೇಟಿ ಮಾಡಿಲ್ಲ. ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವ ಶೋಭಾ ಕರಂದ್ಲಾಜೆಯೂ ಐವರು ಮೀನುಗಾರರ ಮನೆಗೆ ಭೇಟಿ ಕೊಟ್ಟಿಲ್ಲ. ನಾವು ಭೇಟಿ ನೀಡಿ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ಒಂದುಲಕ್ಷ ತಾತ್ಕಾಲಿಕ ಪರಿಹಾರ ನೀಡಿದ್ದೇವೆ. ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಉತ್ತರಿಸಲಿ ಎಂದರು.

ತನ್ನ ಕ್ಷೇತ್ರದ ಮೀನುಗಾರರು ನಾಪತ್ತೆಯಾದ ವೇಳೆಯಲ್ಲಿ ಅನಂತ ಕುಮಾರ್ ಹೆಗ್ಡೆ ಮೀನುಗಾರರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಲೂ ಇಲ್ಲ. ಮತ ನೀಡಿದವರ ಮನೆಗೆ ಹೋಗಿಲ್ಲವೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೆ ಎಂದರು. ಕೇಂದ್ರದ ಮಂತ್ರಿಯಾಗಿರುವ ಹೆಗಡೆಗೂ ಜವಾಬ್ದಾರಿ ಇದೆ. ನಮ್ಮ ರಾಜ್ಯದ ವ್ಯಾಪ್ತಿಯಲ್ಲಿ ನಾವು ಹುಕಾಟ ಮಾಡಬಹುದು. ರಾಜ್ಯ ಮೀರಿ ಹೋದಾಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದರು.

Related posts

Leave a Reply

Your email address will not be published. Required fields are marked *