Header Ads
Header Ads
Breaking News

ಶ್ರೀಮದ್ರಾಮಾಯಣ ಮಹಾಯಜ್ಞ- ಶ್ರೀ ಹನುಮೋತ್ಸವ

ವಿಟ್ಲದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀಮದ್ರಾಮಾಯಣ ಮಹಾಯಜ್ಞ- ಶ್ರೀ ಹನುಮೋತ್ಸವ ಹಾಗೂ ವಿಟ್ಲ ಸೀಮೆಯ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಒಡಿಯೂರು ಸಂಸ್ಥಾನಕ್ಕೆ ವಿವಿಧ ಭಜನಾ ಮಂಡಳಿ- ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಭಗವನ್ನಾಮ ಸಂಕೀರ್ತನೆ ಪಾದಯಾತ್ರೆ  ನಡೆಯಿತು.

ಬೆಳಿಗ್ಗೆ ಏಳುಗಂಟೆಗೆ ಪ್ರಾರಂಭಗೊಂಡ ಭಗವನ್ನಾಮ ಸಂಕೀರ್ತನೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪಾದಯಾತ್ರೆಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿ, ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು.

ಯಾತ್ರೆಯ ಮೊದಲು ನಾನಾ ಭಜನಾ ತಂಡಗಳಿಂದ ಭಜನೆ ಸಂಕೀರ್ತನೆ ನಡೆಯಿತು. ಉಕ್ಕುಡ, ಬೈರಿಕಟ್ಟೆ, ಕನ್ಯಾನ ಮಾರ್ಗವಾಗಿ ಒಡಿಯೂರು ಶ್ರೀ ಸಂಸ್ಥಾನಕ್ಕೆ ಪಾದಯಾತ್ರೆ ಸಾಗಿದೆ. ಕೇರಳದ ಚೆಂಡೆ, ವಿವಿಧ ಭಜನೆ ತಂಡಗಳು ಭಾಗವಹಿಸಿದೆ. ಕಾಶಿಮಠ ಶ್ರೀ ಕಾಶೀಮಠ ಯುವಕ ಹಾಗೂ ಯುವತಿ ಮಂಡಲ, ಉಕ್ಕುಡ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಬೈರಿಕಟ್ಟೆ ಅಶ್ವತ್ಥ ನಾರಾಯಣ ಭಜನಾ ಮಂಡಳಿ, ಕನ್ಯಾನ ಭಾರತ ಸೇವಾಶ್ರಮ, ಕುಟ್ಟಿತ್ತಡ್ಕ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಶ್ರೀಕ್ಷೇತ್ರ ಒಡಿಯೂರು ಭಜನಾ ಮಂಡಳಿ ಹೀಗೆ ದಾರಿಯಲ್ಲಿ ಸಿಗುವ ನಾನಾ ಭಜನಾಮಂಡಳಿ, ಸಂಘಸಂಸ್ಥೆಗಳು ಪಾನೀಯ ವ್ಯವಸ್ಥೆಗೆ ಸಹಕರಿಸಿದೆ. ೧೧ ಗಂಟೆ ವೇಳೆಗೆ ಭಗವನ್ನಾಮ ಸಂಕೀರ್ತನೆ ಪಾದಯಾತ್ರೆ ಒಡಿಯೂರು ಸಂಸ್ಥಾನಕ್ಕೆ ತಲುಪಿದೆ.

ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಶ್ರೀರಾಮ ಎಂದರೆ ಧರ್ಮ. ರಾಮಾಯಣವನ್ನು ಅಧ್ಯಯನ ಮಾಡಿದರೆ ಭಾರತ ದರ್ಶನವಾಗುವುದು. ಶ್ರೀರಾಮ ಲೋಕ ಶಿಕ್ಷಣಕ್ಕೆ ನಿದರ್ಶನವಾದರೆ, ಶ್ರೀಕೃಷ್ಣ ಲೋಕೋತ್ತರ ಶಿಕ್ಷಣವನ್ನು ಬೋಧಿಸಿದ ಗುರುವೆನಿಸಿದ್ದಾರೆ. ಶ್ರೀರಾಮನ ಪರಮಾಪ್ತ ಭಕ್ತ ಹನುಮಂತ ಜೀವ-ಭಾವದ ಸೇತುವಿಗೆ ಉದಾಹರಣೆಯಾಗಿದ್ದು, ರಾಜಧರ್ಮ, ರಾಷ್ಟ್ರ ಧರ್ಮ ಸೂತ್ರವನ್ನು ಜಗತ್ತಿಗೆ ತಿಳಿಸಿದ ಶ್ರೀರಾಮನ ಸೇವಕರಾದಾಗ ರಾಷ್ಟ್ರಸೇವೆ ಮಾಡಿದಂತಾಗುವುದು ಎಂದು ನುಡಿದರು.

ಭಗವನ್ನಾಮ ಸಂಕೀರ್ತನೆ ಪಾದಯಾತ್ರೆ ಸಮಿತಿ ಸಂಚಾಲಕ ಕೆ. ಕೃಷ್ಣಯ್ಯ ವಿಟ್ಲ ಅರಮನೆ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಭಗವನ್ನಾಮ ಸಂಕೀರ್ತನೆ ಪಾದಯಾತ್ರೆ ಸಮಿತಿ ಸಹ ಸಂಚಾಲಕ ದಿನೇಶ್ ಶೆಟ್ಟಿ ಪಟ್ಲಗುತ್ತು, ಶೀನಪ್ಪ ಮಂಗಳಪದವು, ಜಯಂತ್ ಕೊಟ್ಯಾನ್, ಎಚ್.ಕೆ ಪುರುಷೋತ್ತಮ, ವಿಟ್ಲ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಮೊದಲಾದವರು ಭಾಗವಹಿಸಿದ್ದರು.