Header Ads
Breaking News

ಶ್ರೀಲಂಕಾದಲ್ಲಿ ಉಗ್ರರ ಆತ್ಮಾಹುತಿ ದಾಳಿ : ದ.ಕ ಮತ್ತು ಉಡುಪಿಯಲ್ಲಿ ಕಟ್ಟೆಚ್ಚರ

ಶ್ರೀಲಂಕಾದಲ್ಲಿ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಗುರುವಾರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಭೆ ನಡೆದಿದ್ದು, ಭದ್ರತೆ ವಿಚಾರದಲ್ಲಿ ಚರ್ಚಿಸಲಾಯಿತು.

ಎಂಆರ್‌ಪಿಎಲ್, ಎನ್‌ಎಂಪಿಟಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಾಲ್‌ಗಳು, ಇನ್ಫೋಸಿಸ್, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು. ಸಿಸಿಟಿವಿ, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್, ಸುಸಜ್ಜಿತ ಆವರಣ ಗೋಡೆ ನಿರ್ಮಾಣ, ಸೆಕ್ಯುರಿಟಿ ಗಾರ್ಡ್‌ಗಳಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಂದೀಪ್ ಪಾಟೀಲ್ ಸಲಹೆ ನೀಡಿದರು.

ಕರಾವಳಿ ಕಾವಲು ಪಡೆ ಪೊಲೀಸ್ ನಿರ್ದೇಶಕ ಎ.ಎಂ.ಪ್ರಸಾದ್ ನಿರ್ದೇಶನದಡಿ ಮಂಗಳೂರಿನಿಂದ ಕಾರವಾರದ ತನಕ ಬಿಗು ಭದ್ರತೆ, ಕಟ್ಟೆಚ್ಚರ ವಹಿಸಲಾಗಿದೆ. ಕರಾವಳಿ ಕಾವಲು ಪಡೆಯ ಪೊಲೀಸರು ಸಮುದ್ರ ತೀರದ ಆಯಕಟ್ಟಿನ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ.

ಗಡಿ ಪ್ರದೇಶಗಳಲ್ಲಿ ಹಾಗೂ ನಗರದ ಆಯಕಟ್ಟಿನ ಪ್ರದೇಶದಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗುಗೊಳಿಸುವಂತೆ ಆದೇಶಿಸಲಾಗಿದೆ. ಲಾಡ್ಜ್‌ಗಳಲ್ಲಿ ಬಂದು ತಂಗುವವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ.

Related posts

Leave a Reply

Your email address will not be published. Required fields are marked *