Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಉತ್ಸವದಲ್ಲಿ ಟ್ವಿಸ್ಟರ್ ಫ್ರೆಂಚ್ ಫ್ರೈನದ್ದೇ ಕಾರುಬಾರು

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ. ಬಣ್ಣ ಬಣ್ಣದ ಬೆಳಕಿನ ಕಲರವ, ಹೆಜ್ಜೆ ಹೆಜ್ಜೆಗೂ ಬಗೆ ಬಗೆಯ ತಿಂಡಿ ತಿನಿಸುಗಳ ಸುವಾಸನೆ ನೆರೆದಿದ್ದ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿತ್ತು. ಎಲ್ಲೆಲ್ಲೂ ಮೈಸೂರು ಗೋಬಿ ಮಂಚೂರಿ, ದಾವಣಗೆರೆ ಬೆಣ್ಣೆ ದೋಸೆ, ಧಾರವಾಡ ಪೇಡ, ಚುರುಮುರಿ, ಬಿಸಿಬಿಸಿ ಕಡ್ಲೆಕಾಯಿ, ಪಾನಿಪುರಿ, ಐಸ್ ಕ್ರೀಂಗಳದ್ದೇ ಕಾರುಬಾರು…  ಈ ಎಲ್ಲಾ ತಿನಿಸುಗಳು ಎಲ್ಲಾ ಜಾತ್ರೆ ಮೇಳಗಳಲಿ ಸಾಮಾನ್ಯವಾಗಿ ಇದ್ದೇ ಇರುತ್ತವೆ. ಆದರೆ ಇವುಗಳ ನಡುವೆ ಹೈಲೈಟ್ ಆಗಿ ಒಂದಿಷ್ಟು ಜನರ ಕೈಯಲ್ಲಿ ಕಂಡುಬಂದದ್ದು ಅದೊಂದು ಕಲರ್‌ಫುಲ್ ತಿನಿಸು. ಕೆಲವರಿಗೆ ಅದು ತಿನಿಸು ಅಥವಾ ಆಟಿಕೆಯಾ ಅನ್ನೋ ಅನುಮಾನವಾದರೆ ಮತ್ತು ಕೆಲವರು ಅದು ಎಲ್ಲಿ ಸಿಗುತ್ತೆ ಅನ್ನೋ ಹುಡುಕಾಟದಲ್ಲಿದ್ದರು.
ಇ?ಲ್ಲ ಕುತೂಹಲ ಮೂಡಿಸಿದ ತಿಂಡಿಯೇ ಟ್ವಿಸ್ಟರ್ ಫ್ರೆಂಚ್ ಫ್ರೈ . ಬೆಂಗಳೂರಿನಲ್ಲಿ ಜಾತ್ರೆಗಳಲ್ಲಿ, ಫೆಸ್ಟ್‌ಗಳಲ್ಲಿ ಕಂಡುಬರುವ ಆಲೂಗಡ್ಡೆಯಿಂದ ಮಾಡುವ ಈ ತಿಂಡಿ ಲಕ್ಷದೀಪೋತ್ಸವದಲ್ಲಿ ಮೊದಲಬಾರಿಗೆ ಕಂಡುಬಂದಿತು. ಒಂದಿಡೀ ಆಲೂಗೆಡ್ಡೆಗೆ ಕಡ್ಡಿ ಚುಚ್ಚಿ, ಸ್ಕ್ರೂ ಆಕಾರದಲ್ಲಿ ಕಟ್ ಮಾಡಿ ಬಗೆ ಬಗೆಯ ಮಸಾಲೆ ಹಾಕಿ ಎಣ್ಣೆಯಲ್ಲಿ ಕರಿದು ಮಾಡುವ ಈ ತಿಂಡಿಗೆ ಇಟ್ಟಿರುವ ಹೆಸರೇ ಪೊಟಾಟೋ ಟ್ವಿಸ್ಟ್.
ವಸ್ತುಪ್ರದರ್ಶನದಲ್ಲಿ ಹಾಕಿದ್ದ ಅಂಗಡಿಗಳಲ್ಲಿ ಒಂದಾಗಿದ್ದ ಶ್ರೀ ಗಜಾನನ ಚಾಟ್ಸ್ ಹೌಸ್ ಅವರು ಈ ಟ್ವಿಸ್ಟರ್ ಫ್ರೆಂಚ್ ಫ್ರೈಯನು ಮಾರುತ್ತಿದ್ದರು.  ಮೂಲತಃ ಮೈಸೂರಿನವರಾದ ಸಂತೋಷ. ಅನ್ನುವವರು ವ್ಯಾಪಾರಕ್ಕಾಗಿ ಬೆಂಗಳೂರಿನಲ್ಲಿ ಚಾಟ್ಸ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಲಕ್ಷದ್ವೀಪೋತ್ಸವದ ಪ್ರಯುಕ್ತ ಈ ಬಾರಿ ಮೊದಲ ಸಲ ಟ್ವಿಸ್ಟರ್ ಫ್ರೆಂಚ್ ಫ್ರೈಯನು ಪರಿಚಯಿಸಿದರು. ಮೊದಲಿಗೆ ಚಾಟ್ಸ್ ಮಾತ್ರ ಸಿದ್ಧಪಡಿಸುತ್ತಿದ್ದ ಇವರು ಕಳೆದ 4 ವರ್ಷಗಳಿಂದ ಈ ಹೊಸ ಖಾದ್ಯ ಮಾರಾಟ ಮಾಡುತ್ತಿದ್ದಾರೆ. ವಿದೇಶಿ ತಿಂಡಿಯಾದ ಇದು ಅದರ ರುಚಿ ಹಾಗೂ ಆಕಾರದಿಂದಲೇ ಪ್ರಪಂಚದ ಹಲವು ಭಾಗಗಳಲ್ಲಿ ಜನಪ್ರಿಯವಾಗಿದೆ. ಈ ಬಾರಿಯ ದೀಪೋತ್ಸವದಲ್ಲಿ ತಿಂಡಿ ಪ್ರಿಯರ ಕೇಂದ್ರ ಬಿಂದು ಇದಾಗಿತ್ತು. ಇದರ ಬೆಲೆ 50 ರೂಪಾಯಿಗಳು. ಬೆಲೆ ಕೇಳಿ ಒಮ್ಮೆ ಹಿಂದುಮುಂದು ನೋಡುವವರು ಕೆಲವರು,  ಇರಲಿ ಒಮ್ಮೆ ರುಚಿ ನೋಡಲೇಬೇಕು ಅನ್ನೋರು ಇನ್ನು ಕೆಲವರು, ಮಕ್ಕಳು ಹಠ ಮಾಡ್ತಿದ್ರು ಅಂತ ತೆಗೆದುಕೊಡುವವರು ಮತ್ತೂ ಕೆಲವರು. ಅದೇನೇ ಇದ್ದರೂ ಈ ಬಾರಿಯ ಲಕ್ಷದೀಪೋತ್ಸವದಲ್ಲಿ ದೇಸಿ ತಿಂಡಿಗಳ ನಡುವೆ ಹೊಸ ವಿದೇಶಿ ತಿಂಡಿ ಹೆಚ್ಚಾಗಿ ಕಂಡು ಬಂದಿದ್ದು ವಿಶೇಷ.

Related posts

Leave a Reply

Your email address will not be published. Required fields are marked *