Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ : ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಶುಭಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ವೈಭವೋಪೇತವಾಗಿ ನೆರವೇರುವ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವದ ಧಾರ್ಮಿಕ ಪೂಜಾ ಕಾರ್ಯಗಳು ಪ್ರಾರಂಭಗೊಂಡವು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಹೊಸಕಟ್ಟೆ ಉತ್ಸವದ ಪೂಜಾಕಾರ್ಯದ ವಿಧಿ-ವಿಧಾನಗಳು ನೆರವೇರಿದವು.ಹೊಸಕಟ್ಟೆ ಉತ್ಸವದ ಪ್ರಯುಕ್ತ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಲಾಲಕಿ ಪಲ್ಲಕ್ಕಿಯಲ್ಲಿ ಕೂರಿಸಿ ಅತ್ಯಂತ ವಿಜೃಂಭಣೆಯ ಮೆರವಣಿಗೆಯೊಂದಿಗೆ ವಸಂತಮಹಲ್‌ನ ಬಳಿ ಭಕ್ತರ ಸಮ್ಮುಖದಲ್ಲಿ ಕರೆದೊಯ್ಯಲಾಯಿತು. ವಾದ್ಯಗಳ ಸೇವೆಯೊಂದಿಗೆ ಸಾಗಿದ ಮೆರವಣಿಗೆಯಲ್ಲಿ ದೇವಳದ ಎರಡು ಆನೆಗಳು ವಾದ್ಯಗಳ ಶಬ್ದಕ್ಕೆ ಹೆಜ್ಜೆ ಹಾಕಿದ್ದು ಮೆರವಣಿಗೆಗೆ ವಿಶೇಷ ಮೆರಗು ನೀಡಿತು.
ಈ ಸಂದರ್ಭದಲ್ಲಿ ಬಿರುದಾವಳಿ ಹಾಗೂ ಎರಡು ಬದಿಯಲ್ಲಿ ಪಂಜನ್ನು ಹಿಡಿಯಲಾಗಿತ್ತು. ಉತ್ಸವದಲ್ಲಿ ಸ್ವಾಮಿಗೆ ವಾಲಗ, ಕೊಳಲು, ಚೆಂಡೆ, ಶಂಖಗಳ ಸಂಗೀತ ಸೇವೆಗಳು ಉತ್ಸವದಲ್ಲಿ ನೆರೆದಿದ್ದ ಭಕ್ತರ ಭಕ್ತಿಭಾವವನ್ನುಇನ್ನಷ್ಟು ಹೆಚ್ಚಿಸಿದವು.ದೇವರನ್ನು ಹೊಸಕಟ್ಟೆಯಲ್ಲಿ ಕೂರಿಸಿದ ನಂತರ ಸ್ವಾಮಿಗೆ ಅಷ್ಟ ಬಗೆಯ ಪೂಜೆಗಳು ನಡೆದವು. ವಿಶೇಷ ವಿಧಾನದಲ್ಲಿ ಪೂಜೆಯಾದ ನಂತರ ಹಲವು ವಿಧದ ಸೇವೆಗಳನ್ನು ನೆರವೇರಿಸಲಾಯಿತು. ಗಾಯನ ಸೇರಿದಂತೆ ಮೂರು ಬಗೆಯ ಸಂಗೀತ ಸೇವೆಯಲ್ಲಿ ಪೂಜೆಯು ಸಂಪನ್ನಗೊಂಡಿತು.
ಪಲ್ಲಕ್ಕಿಯು ದೇವಾಲಯಕ್ಕೆ ಮರಳಿದ ನಂತರ ಸ್ವಾಮಿಯ ಮೂರ್ತಿಯನ್ನು ಬೆಳ್ಳಿರಥದಲ್ಲಿ ಕೂರಿಸಲಾಯಿತು. ಬೆಳ್ಳಿರಥದೊಂದಿಗೆ ದೇವಾಲಯದ ಸುತ್ತಒಂದು ಸುತ್ತು ಮೆರವಣಿಗೆ ಸಾಗಿತು. ಮೆರವಣಿಗೆ ಮುಗಿದ ಬಳಿಕ ದೇವರ ಮೂರ್ತಿಗೆಕೊನೆಯ ಮಂಗಳಾರತಿ ಮಾಡಿ, ಮೂರ್ತಿಯನ್ನು ದೇಗುಲದೊಳಗೆ ಕೊಂಡೊಯ್ಯುವುದರೊಂದಿಗೆ ಹೊಸಕಟ್ಟೆಉತ್ಸವ ಮುಕ್ತಾಯಗೊಂಡಿತು.
ಉತ್ಸವದ ವಿಧಿವಿಧಾನ: ಮೊದಲಿಗೆ ಗರ್ಭಗುಡಿಯಿಂದ ಮಂಜುನಾಥ ಸ್ವಾಮಿಯನ್ನು ಪಲಕ್ಕಿಯಲ್ಲಿ ಕೂರಿಸಲಾಯಿತು. ಚಂಡೆ, ಕೊಳಲು, ವಾಲಗ, ಶಂಖ ಹೀಗೆ ವಿವಿಧ ವಾದ್ಯಸೇವೆಯೊಂದಿಗೆ ಪಲ್ಲಕ್ಕಿಯಲ್ಲಿ 16ಸುತ್ತು ಬಂದ ಬಳಿಕ ಸ್ವಾಮಿಯ ಮೂರ್ತಿಯನ್ನು ಲಾಲಕ್ಕಿ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ನಂತರ ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಭಕ್ತರಸಮ್ಮುಖದಲ್ಲಿ ವಸಂತಮಹಲ್‌ಗೆ ಕರೆದೊಯ್ದು ವಿಶೇಷ ಪೂಜೆ ಹಾಗೂ ಗಾಯನ, ಶಂಖ ಹೀಗೆ ಹಲವು ವಾದ್ಯಗಳೊಂದಿಗೆ ಸ್ವಾಮಿಗೆ ಸಂಗೀತ ಸೇವೆಯನ್ನು ನೆರವೇರಿಸಲಾಯಿತು.

Related posts

Leave a Reply

Your email address will not be published. Required fields are marked *