

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಎನ್ನುವುದು ರಾಜ್ಯದಲ್ಲಿ ವರ್ಷದಿಂದೀಚೆಗೆ ಕೇಳಿಬರುತ್ತಿದ್ದ ಮಾತು. ಕೋವಿಡ್ ಲಾಕ್ಡೌನ್, ಉಪಚುನಾವಣೆ, ಗ್ರಾಮ ಪಂಚಾಯತ್ ಚುನಾವಣೆಗಳು ಹೀಗೆ ಅನೇಕ ಇತ್ಯಾದಿ ಕಾರಣಗಳಿಂದಾಗಿ ಪದೇ ಪದೇ ಮುಂದೂಡಲ್ಪಡುತ್ತಿದ್ದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇದೇ ಜ.13ರಂದು ಮಧ್ಯಾಹ್ನ 7 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಬಾರಿ ಕರಾವಳಿಗೆ ಪ್ರಾತಿನಿಧ್ಯ ಸಿಗಲಿದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿದ್ದು, ಸೋಲಿಲ್ಲದ ಸರದಾರ, ಸುಳ್ಯದ ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಕರಾವಳಿಗೆ ಪ್ರಾತಿನಿಧ್ಯ ಎನ್ನುವ ವಿಚಾರ ಬಂದಾಗ, ಪ್ರತೀ ಬಾರಿಯೂ ಬಹು ನಿರೀಕ್ಷೆ ಸುಳ್ಯ ಕ್ಷೇತ್ರದತ್ತ ನೆಡುತ್ತದೆ. ಹಾಲಿ ಶಾಸಕರಾದ ಶ್ರೀಯುತ ಎಸ್. ಅಂಗಾರ ಅವರಿಗೆ ಈ ಬಾರಿ ಪ್ರಾತಿನಿಧ್ಯ ಸಿಗುವುದು ಖಚಿತ ಎನ್ನಲಾಗಿದೆ. ಇದಕ್ಕೆ ಕಾರಣವೆಂದರೆ ಸುಳ್ಯ ಕ್ಷೇತ್ರವು ಇಲ್ಲಿಯವರೆಗೆ ಸುಮಾರು 14 ವಿಧಾನ ಸಭಾ ಚುನಾವಣೆಯನ್ನು ಕಂಡಿದೆ. ಎಸ್ ಅಂಗಾರ ಗರಿಷ್ಠ ಅವಧಿಯಿಂದ ಅಂದರೆ ಸತತವಾಗಿ ಆರನೇ ಬಾರಿಗೆ ಗೆದ್ದಿದ್ದಾರೆ. ಅಷ್ಟಿದ್ದರೂ ತಾನು ಪಕ್ಷದ ಬೆಂಬಲಿಗ, ಕಾರ್ಯಕರ್ತ ಹಾಗೂ ಪಕ್ಷನಿಷ್ಠನಾಗಿಯೇ ಇರುತ್ತೇನೆ, ಯಾವುದೇ ಸಂಪುಟದ ಆಕಾಂಕ್ಷಿಯಲ್ಲ ಎಂದು ಸಚಿವ ಸ್ಥಾನದಿಂದ ದೂರ ಉಳಿದು ಇನ್ನಿತರರಿಗೆ ಅವಕಾಶಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ ಅವರಿಗೆ ನಿಜಕ್ಕೂ ಸಚಿವ ಸ್ಥಾನ ಸಿಗಬೇಕು ಎನ್ನುವುದು ಕಾರ್ಯಕರ್ತರ ಮನದಾಸೆ. ಅದರಂತೆ ಇದೀಗ ಸಂಪುಟ ವಿಸ್ತರಣೆಯ ಬಗ್ಗೆ ಬಿಎಸ್ವೈ ಅವರು ಮಾಹಿತಿ ನೀಡಿದ ತಕ್ಷಣ ಅಭಿಮಾನಿಗಳಲ್ಲಿ ಮತ್ತೆ ಸಂತಸದ ವಾತಾವರಣ ಸೃಷ್ಠಿಯಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶದ ಲೆಕ್ಕಾಚಾರ, ಮುಂಬರುವ ತಾಲೂಕು /ಜಿಲ್ಲಾ ಪಂಚಾಯತ್ ಚುನಾವಣೆ, ಜಾತಿಯಾದಾರಿತ ಲೆಕ್ಕಾಚಾರ, ಕರಾವಳಿಯ ರಾಜ್ಯಾಧ್ಯಕ್ಷರ ಬೆಂಬಲ ಹೀಗೆ ಎಲ್ಲಾ ಕಾರಣಗಳು ಅಂಗಾರರಿಗೆ ಸಚಿವ ಸ್ಥಾನ ಲಭಿಲಿದೆ ಎನ್ನುವ ನಿರೀಕ್ಷೆಗಳನ್ನು ದಟ್ಟಗೊಳಿಸಿದೆ. ಈ ನಡುವೆ ಸಚಿವ ಸಂಪುಟ ವಿಸ್ತರಣೆಯ ನಿಟ್ಟಿನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮುನಿರತ್ನ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಸುನಿಲ್ ಕುಮಾರ್, ಎಂ.ಟಿ.ಬಿ. ನಾಗರಾಜ್, ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಹಾಲಪ್ಪ ಆಚಾರ್ ಅವರ ಹೆಸರು ಖಾತೆ ಗಿಟ್ಟಿಸಿಕೊಳ್ಳುವವರ ಪೈಕಿ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅದರ ನಡುವೆ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಲು ಯಾರದ್ದೇ ವಿರೋಧ ಇಲ್ಲವಾಗಿರುವ ಕಾರಣ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಗ್ಯಾರಂಟಿ ಎಂದೇ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸಾಕಷ್ಟು ಲೆಕ್ಕಾಚಾರಗಳು ನಡೆಯುತ್ತಿರುವ ನಡುವೆಯೇ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಮಾತ್ರ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ಮುಂದೇನಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.