Header Ads
Header Ads
Breaking News

ಸಂತೆ ಸ್ಥಳಾಂತರಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯೇ ಕಾರಣ. ಸತ್ಯ ಬಿಚ್ಚಿಟ್ಟ ಆಲಿ; ಸುಳ್ಳಾಗಿದ್ದರೆ ’ಪ್ರಮಾಣ’ದ ಸವಾಲು..!

ಪುತ್ತೂರು: ಎರಡು ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದ ಸಂತೆ ಸ್ಥಳಾಂತರದಲ್ಲಿ ಹುಟ್ಟಿಕೊಂಡ ವಿವಾದದ ಬಗ್ಗೆ ಇದುವರೆಗೆ ಮುಚ್ಚಿಟ್ಟಿದ್ದ ಸತ್ಯವನ್ನು ಬಯಲಿಗೆ ತರುತ್ತಿದ್ದೇನೆ. ಅಂದು ಸಂತೆ ಸ್ಥಳಾಂತರ ಕುಮ್ಮಕ್ಕು ನೀಡಿರುವುದು ಆಗಿನ ಶಾಸಕಿ ಶಕುಂತಳಾ ಶೆಟ್ಟಿ. ಸಂತೆ ವಿಚಾರದಲ್ಲಿ ೬ ತಿಂಗಳು ನಾವು ನಿದ್ದೆಯಿಲ್ಲದೆ ಕಳೆಯಲೂ ಅವರೇ ಕಾರಣ. ಇದು ಸತ್ಯ ವಿಚಾರ ಎಂದು ಪುತ್ತೂರಿನ ಕಾಂಗ್ರೆಸ್ ನಾಯಕ ಎಚ್. ಮಹಮ್ಮದ್ ಆಲಿ ಸವಾಲು ಹಾಕಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ನಗರಸಭಾ ಚುನಾವಣೆಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡು, ಹಾಲಿ ಸದಸ್ಯರಿಗೆ ಟಿಕೆಟ್ ನೀಡದೆ ತನ್ನದೇ ಸರ್ವಾಧಿಕಾರಿ ಧೋರಣೆ ತಳೆದ ಶಕುಂತಳಾ ಶೆಟ್ಟಿ, ಈಗ ಪಕ್ಷವವನ್ನು ಹೀನಾಯವಾಗಿ ಸೋಲಿಸಿ ಕೂತಿದ್ದಾರೆ. ಆದರೂ ಅವರ ತಂಡ ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದರು.ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ಸಂತೆಯನ್ನು ದೂರದ ಎಪಿಎಂಸಿಗೆ ಸ್ಥಳಾಂತರಿಸಲು ಆಗಿನ ಎ.ಸಿ. ಅವರ ಜತೆ ಮಾತನಾಡಿ ನಿರ್ಧರಿಸಿದ್ದೇ ಶಕುಂತಳಾ ಶೆಟ್ಟಿ. ನಾನು ಎ.ಸಿ. ಅವರ ಜತೆ ಮಾತನಾಡುವಾಗ ಸ್ಥಳಾಂತರ ಬೇಡ ಎಂದಿದ್ದೆ. ಆದರೂ ಎ.ಸಿ. ಆದೇಶದಂತೆ ಸ್ಥಳಾಂತರ ಮಾಡಿದಾಗ ನಗರಸಭೆ ಆಡಳಿತದಲ್ಲಿದ್ದುಕೊಂಡು ನಾವು ಅನಿವಾರ್ಯವಾಗಿ ಅದಕ್ಕಾಗಿ ಸಹಕರಿಸಬೇಕಾಯಿತು. ಪ್ರತಿಪಕ್ಷ ಬಿಜೆಪಿ ಜತೆ ಸೇರಿಕೊಂಡು ಇವರು ಕೂಡ ತಮ್ಮದೇ ಪಕ್ಷದ ನಗರಸಭೆ ಆಡಳಿತದ ಮೇಲೆ ಗೂಬೆ ಕೂರಿಸಿದರು. ನಮ್ಮದೇ ಪಕ್ಷದ ಶಾಸಕಿಗೆ ಮುಜುಗರ ಆಗಬಾರದೆಂದು ನಾವು ಆವತ್ತು ಸತ್ಯ ಹೇಳಲಿಲ್ಲ. ಇವತ್ತು ನಮ್ಮ ಮೇಲೆ ದಬ್ಬಾಳಿಕೆ ನಡೆಸಿ, ನಮಗ್ಯಾರಿಗೂ ಟಿಕೆಟ್ ನೀಡದೆ ಸರ್ವಾಧಿಕಾರ ಮೆರೆದ ಶಕುಂತಳಾ ಶೆಟ್ಟಿ ಪಕ್ಷವನ್ನು ನಗರಸಭೆಯಲ್ಲಿ ಗೆಲ್ಲಿಸಿದ್ದರೆ ನಮ್ಮ ತಕರಾರು ಇರುತ್ತಿರಲಿಲ್ಲ ಎಂದು ಆಲಿ ನುಡಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಉಷಾ ಧನಂಜಯ ಆಚಾರ್ಯ, ಕೊರಗಪ್ಪ ಗೌಡ, ಜಗದೀಶ್ ಕಜೆ, ಹನೀಫ್ ಪುಂಚತ್ತಾರ್ ಉಪಸ್ಥಿತರಿದ್ದರು.

Related posts

Leave a Reply