Header Ads
Header Ads
Breaking News

ಸಚಿವರ ಗ್ರೂಪಿಗೆ ‘ಸೆಕ್ಸ್’ ವಿಡಿಯೋ ಸೈಟ್ ಕ್ಲಿಪ್ ರವಾನೆ ತಿಳಿಯದೆ ಆಗಿರುವ ಪ್ರಮಾದ-ಪುತ್ತೂರು ಬ್ಲಾಕ್ ಅಧ್ಯಕ್ಷರಿಂದ ಸ್ಪಷ್ಟನೆ

 

ಪುತ್ತೂರು : ವಾಟ್ಸಪ್‌ಗೆ ಹರಿದು ಬಂದಿದ್ದ ‘ರಿಯಲ್ ಸೆಕ್ಸ್’ ಎಚ್‌ಟಿಟಿಪಿ ಪ್ರಿಯಾ ವಿಡಿಯೋಸ್ ಡಾಟ್ ಇನ್ ಎನ್ನುವ ವಿಡಿಯೋ ಸೈಟ್ ಗೇಮ್ ಕ್ಲಿಪ್ ಒಂದನ್ನು ಆಕರ್ಷಕ ಬಹುಮಾನ ಪಡೆಯುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ‘ಶ್ರೀ ರಮಾನಾಥ ರೈ ಗೆಳೆಯರ ಬಳಗ’ಮತ್ತು ಬ್ಲಾಕ್ ಕಾಂಗ್ರೆಸ್ ವಾಟ್ಸಪ್ ಗ್ರೂಪ್‌ಗಳ ಸಹಿತ ೫ ವಾಟ್ಸಪ್ ಗ್ರೂಪುಗಳಿಗೆ ರವಾನೆ ಮಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಚಾತುರ್ಯ ಇದೀಗ ಅವರ ಮಾನಹರಣಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಪಕ್ಷದಲ್ಲಿನ ಟೀಕೆಗೂ ಗುರಿಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆಯ ಜನಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಗಣ್ಯ ವ್ಯಕ್ತಿಗಳಿಗಿರುವ ವಾಟ್ಸಪ್ ಗ್ರೂಪ್‌ಗಳಿಗೆ ಈ ವಿಡಿಯೋ ಕ್ಲಿಪ್ ಹರಿದು ಬಂದ ಬೆನ್ನಲ್ಲೇ ಹಲವರಿಂದ ಇದಕ್ಕೆ ನಿಂದನೆಯ ಪ್ರತಿಕ್ರಿಯೆ ಹಾಗೂ ತಿಳುವಳಿಕೆಯ ಸಲಹೆ ವ್ಯಕ್ತವಾಗಿದೆ.
ಫಝಲ್ ರಹೀಂ ಅವರ ವಾಟ್ಸಪ್ ಗ್ರೂಪಿಗೆ ಬಂದಿದ್ದ ‘ರಿಯಲ್ ಸೆಕ್ಸ್’ ಎಚ್‌ಟಿಟಿಪಿ ಪ್ರಿಯಾ ವಿಡಿಯೋಸ್ ಡಾಟ್ ಇನ್ ಎನ್ನುವ ವಿಡಿಯೋ ಸೈಟ್ ಕ್ಲಿಪ್ ಅನ್ನು ಕ್ಲಿಕ್ ಮಾಡಿದ ಸಂದರ್ಭದಲ್ಲಿ ‘ಲಕ್ಕಿ ವೀಲ್ ಸ್ಪಿನ್ ಮಾಡಿ ಆಕರ್ಷಕ ಬಹುಮಾನಗಳನ್ನು ಪಡೆಯಿರಿ’ ಎಂಬ ಸಂದೇಶ ಬಂದಿದ್ದ ಹಿನ್ನಲೆಯಲ್ಲಿ ಅವರು ಬಹುಮಾನ ಪಡೆಯುವ ಆಸೆಯಿಂದ ಲಕ್ಕಿ ವೀಲ್ ಸ್ಪಿನ್ ಮಾಡಿ, ಅದರಲ್ಲಿದ್ದ ಮಾಹಿತಿಯಂತೆ ೫ ವಾಟ್ಸಪ್ ಗ್ರೂಪ್‌ಗಳಿಗೆ ಈ ಕ್ಲಿಪ್‌ನ್ನು ರವಾನಿಸಿದ್ದರೆನ್ನಲಾಗಿದೆ. ಈ ಆಚಾತುರ್ಯದಿಂದಾಗಿ ಇದೀಗ ಅವರು ಟೀಕೆಗಳನ್ನು ಎದುರಿಸಬೇಕಾಗಿ ಬಂದಿದೆ.
ಯಾರೇ ಮಾಡಿದರೂ ತಪ್ಪು : ಶಕುಂತಳಾ ಶೆಟ್ಟಿ
ಯಾರೇ ಆಗಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬ್ಲೂಫಿಲಂನಂತಹ ಅನೈತಿಕ, ಅಶ್ಲೀಲ ವಿಡಿಯೋಗಳನ್ನು ಮತ್ತು ಇನ್ನೊಬ್ಬರಿಗೆ ನೋವಾಗುವ ವಿಚಾರಗಳನ್ನು ರವಾನಿಸಿದರೆ ಶಾಸಕಿಯಾಗಿ ಮಾತ್ರವಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿಯೂ ತಾನು ವಿರೋಧಿಸುತ್ತೇನೆ .ಅಂತಹ ಕೆಲಸ ಯಾರೇ ಮಾಡಿದ್ದರೂ ತಪ್ಪು .ನಾಯಕರಾಗಿದ್ದರೂ ತಪ್ಪು ಅದರಲ್ಲಿ ಎರಡು ಮಾತಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಾ ವಾಟ್ಸಪ್ ಗ್ರೂಪ್‌ಗಳಿಂದ ಬಂದ ಸಂದೇಶ, ವಿಡಿಯೋಗಳನ್ನು ತಾನು ಅಳಿಸಿ ಹಾಕಿರುವ ಕಾರಣ ತಾನು ಈ ಕ್ಲಿಪ್ ನೋಡಿಲ್ಲ. ಮಾಧ್ಯಮ ಮಂದಿಯಿಂದ ಈಗ ತಾನೇ ಈ ವಿಚಾರ ತಿಳಿದು ಬಂದಿದ್ದು, ಈ ಅಶ್ಲೀಲ ವಿಡಿಯೋ ಸೈಟ್ ಕ್ಲಿಪ್ ರವಾನಿಸಿದವರು ಒಳ್ಳೆಯ ವ್ಯಕ್ತಿಗಳಾಗಿದ್ದಲ್ಲಿ ಅವರು ತಮ್ಮ ಯೋಗ್ಯತೆಯ ಬಗ್ಗೆ ಆಲೋಚನೆ ಮಾಡಬೇಕು ಎಂದಿರುವ ಅವರು ವಿಧಾನಸಭೆಯಲ್ಲಿ ಬ್ಲೂಫಿಲಂ ನೋಡಿ ಸದನಕ್ಕೆ ಅವಮಾನವಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ.ಹೀಗಿರುವಾಗ ಸಾರ್ವಜನಿಕ ರಂಗದಲ್ಲಿರುವ ತಮಗೆ ಬಂದ ಇಂತಹ ವಿಡಿಯೋ ಸೈಟ್ ಕ್ಲಿಪ್‌ನ್ನು ಇನ್ನೊಬ್ಬರಿಗೆ ರವಾನಿಸುತ್ತಾರೆ ಎಂದಾದರೆ ಅವರೂ ಸರಿಯಿಲ್ಲ ಎಂದೇ ಅರ್ಥ ಎಂದು ಅವರು ತಿಳಿಸಿದ್ದಾರೆ.
ಈ ಕೆಲಸವನ್ನು ಯಾರು ಮಾಡಿದ್ದಾರೆ ಎಂಬುವುದು ತನಗೆ ತಿಳಿದಿಲ್ಲ. ಈ ಬಗ್ಗೆ ತಿಳಿದುಕೊಂಡು ವಿಷಯವನ್ನು ಪಕ್ಷದ ವರಿಷ್ಠ ನಾಯಕರ ಗಮನಕ್ಕೆ ತರುತ್ತೇನೆ. ಕ್ರಮಕೈಗೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದ್ದಾರೆ.
ಹೀಗಾಗುತ್ತದೆ ಎಂದು ಗೊತ್ತಿರಲಿಲ್ಲ : ಫಝಲ್
ತನ್ನ ವಾಟ್ಸಪ್ ಗ್ರೂಪಿಗೆ ಬಂದಿದ್ದ ವಿಡಿಯೋ ಸೈಟ್ ಕ್ಲಿಪ್ ಒಂದನ್ನು ಟಚ್ ಮಾಡಿ ನೋಡಿದಾಗ ಅದರಲ್ಲಿ ಯಾವುದೇ ಅಶ್ಲೀಲತೆ ಇರಲಿಲ್ಲ. ಬದಲಾಗಿ ಲಕ್ಕಿ ಚಕ್ರ ಕಂಡು ಬಂದಿತ್ತು. ಅದನ್ನು ತಿರುಗಿಸಿ ಆಕರ್ಷಕ ಬಹುಮಾನ ಪಡೆಯುವಂತೆ ಮೆಸೇಜ್ ಇತ್ತು. ಲಕ್ಕಿ ಚಕ್ರ ತಿರುಗಿಸಿದಾಗ ೫ ಮಂದಿಗೆ ಶೇರ್ ಮಾಡಿ ಬಹುಮಾನ ಪಡೆಯುವಂತೆ ಮಾಹಿತಿ ಬಂದ ಹಿನ್ನಲೆಯಲ್ಲಿ ಅದನ್ನು ೫ ಗ್ರೂಪ್‌ಗಳಿಗೆ ಶೇರ್ ಮಾಡಿದ್ದೇನೆಯೇ ಹೊರತು ಇದರಲ್ಲಿ ಕೆಟ್ಟ ಉದ್ದೇಶ ಇರಲಿಲ್ಲ. ಹೀಗಾಗುತ್ತದೆ ಎಂಬ ವಿಚಾರವೂ ತಿಳಿದಿರಲಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ಪ್ರತಿಕ್ರಿಯೆ ನೀಡಿದ್ದಾರೆ.
ಗ್ರೂಪ್‌ಗೆ ರವಾನಿಸಿದ ಈ ವಿಡಿಯೋ ಸೈಟ್ ಕ್ಲಿಪ್ ಅಶ್ಲೀಲತೆಯಿಂದ ಕೂಡಿರುವ ವಿಚಾರ ಪ್ರತಿಕ್ರಿಯೆಗಳು ಬಂದ ಬಳಿಕವಷ್ಟೇ ತನ್ನ ಗಮನಕ್ಕೆ ಬಂದಿದೆ. ತಿಳಿಯದೆ ಮಾಡಿದ ಪ್ರಮಾದದಿಂದಾಗಿ ಈ ರೀತಿ ಆಗಿದೆ ಎಂದು ಅವರು ತಿಳಿಸಿದ್ದಾರೆ.

Related posts

Leave a Reply