Header Ads
Breaking News

ಸತ್ಯಕ್ಕೆ ಒಂದೆರಡು ಬಾರಿ ಸೋಲಾಗಬಹುದು ಆದರೆ ಸತ್ಯವನ್ನು ಸಾಯಿಸಲು ಯಾರಿಂದಲೂ ಸಾಧ್ಯವಿಲ್ಲ -ಹರಿಕೃಷ್ಣ ಬಂಟ್ವಾಳ್

ಪುತ್ತೂರು : ಸತ್ಯಕ್ಕೆ ಒಂದೆರಡು ಬಾರಿ ಸೋಲಾಗಬಹುದು ಆದರೆ ಸತ್ಯವನ್ನು ಸಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‍ನ ಅಧ್ಯಕ್ಷರಾಗಿರುವ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು.ಅವರು ದ.6ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಭಾ ಭವನದಲ್ಲಿ ನಡೆದ ತುಳುನಾಡಿನ ಅವಳಿ ವೀರ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಳ ಹಾಗೂ ಮೂಲಸ್ಥಾನವಾದ ಪಡುಮಲೆಯಲ್ಲಿ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‍ನ ಮೂಲಕ ಜೀರ್ಣೋದ್ಧಾರಗೊಂಡಿರುವ ಕೋಟಿ-ಚೆನ್ನಯರ ಆರಾಧ್ಯ ದೇವರಾದ ನಾಗ ಬೆರ್ಮೆರೆಗುಡಿ, ತೀರ್ಥಬಾವಿ, ನಾಗಸನ್ನಿಧಿ, ರಕ್ತೇಶ್ವರಿ ಹಾಗೂ ದೇಯಿ ಬೈದೆತಿ ಸಮಾಧಿ ಸ್ಥಳಗಳ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತುಳುನಾಡಿನಲ್ಲಿ ಕೋಟಿ ಚೆನ್ನಯರ ಸುಮಾರು 280ಕ್ಕೂ ಅಧಿಕ ಗರಡಿಗಳು ಅಭಿವೃದ್ಧಿಯಾಗಿದೆ. ಆದರೆ ಕೋಟಿ-ಚೆನ್ನಯರ ಜನ್ಮಸ್ಥಳ ಕತ್ತಲೆಯಲ್ಲಿದ್ದರೂ ಯಾರೂ ಮಾತನಾಡುವುದೇ ಇಲ್ಲ. ಜನ್ಮಸ್ಥಾನದ ಕುರಿತು ಯಾರಿಗೂ ಯಾಕೆ ಕಾಳಜಿ ಇಲ್ಲ ಎಂದು ಪ್ರಶ್ನಿಸಿದರು. ಮಹಾನ್ ಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಷಡ್ಯಂತ್ರ ಯಾಕೆ, ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆಯಲ್ಲೇ ಇರುವುದು ಹೊರತು ಬೇರೆಲ್ಲಿಯೂ ಅಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೂ ಜನ್ಮಸ್ಥಳದ ಬಗ್ಗೆ ಗೊಂದಲಗಳು ಯಾಕೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಆದರ್ಶ ಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಎಷ್ಟು ಸರಿ, ಇದು ಕೋಟಿ ಚೆನ್ನಯರಿಗೆ ಮಾಡುವ ಅವಮಾನವಲ್ಲವೇ ಎಂದು ಕೇಳಿದ ಅವರು ದೇಯಿ ಬೈದೆತಿ ಸಮಾಧಿ ಎರಡು ಕಡೆಗಳಲ್ಲಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕೋಟಿ ಚೆನ್ನಯರನ್ನು ಜಾತಿಗೆ ಸೀಮಿತಗೊಳಿಸಿ, ಹಣ ಮಾಡುವ ಉದ್ದೇಶ ಟ್ರಸ್ಟ್‍ಗಿಲ್ಲ. 5 ಶತಮಾನಗಳ ಇತಿಹಾಸವಿರುವ ಕೋಟಿ ಚೆನ್ನಯ ಮೂಲ ಸ್ಥಾನ ಹಾಗೂ ಜನ್ಮಸ್ಥಳವನ್ನು ಚರಿತ್ರೆ, ನೈಜ ಚಿತ್ರವನ್ನು ದೇಶದ ಜನತೆಗೆ ತಿಳಿಸುವುದೇ ಟ್ರಸ್ಟ್‍ನ ಉದ್ದೇಶವಾಗಿದೆ. ಇದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ರಾಜಕೀಯ ಲಾಭ ಪಡೆಯುವಷ್ಟು ಮೂರ್ಖನಲ್ಲ. ಟ್ರಸ್ಟ್‍ನ ಮುಖಾಂತರ ಹೆಸರು ಗಳಿಸುವ ಉದ್ದೇಶವೂ ಇಲ್ಲ. ಸತ್ಯ ವಿಚಾರಗಳನ್ನು ದೇಶದ ಜನತೆಗೆ ತಿಳಿಸಿ, ಕತ್ತಲೆಯಲ್ಲಿರುವ ಮೂಲಸ್ಥಾನ ಹಾಗೂ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಆ ಮೂಲಕ ಕೋಟಿ ಚೆನ್ನಯರ ಸಾಹಸ, ಆದರ್ಶಗಳನ್ನು ಯುವ ಜನತೆ ಹಾಗೂ ಮುಂದಿನ ಪೀಳಿಗೆಯು ಹೃದಯದಲ್ಲಿ ಮೆಲುಕು ಹಾಕುವಂತೆ ಮಾಡುವುದೇ ಉದ್ದೇಶವಾಗಿದೆ ಎಂದು ಹರಿಕೃಷ್ಣ ಬಂಟ್ವಾಳ್ ತಿಳಿಸಿದರು. ಸತ್ಯವನ್ನು ಸಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಚಲನಾ ಸೇವಾ ಟ್ರಸ್ಸ್‍ನ ಗೌರವಾಧ್ಯಕ್ಷರಾದ ವಿಟ್ಲದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮಾತನಾಡಿ, ಕೋಟಿ ಚೆನ್ನಯ ಮೂಲಸ್ಥಾನದ ಅಭಿವೃದ್ಧಿಯನ್ನು ವೈಯಕ್ತಿಕ ಲಾಭಕ್ಕಾಗಿ ನಡೆಸುವುದಿಲ್ಲ. ಯಾವುದೇ ಸ್ವಾರ್ಥ, ರಾಜಕೀಯದ ದುರುದ್ದೇಶವಿಲ್ಲ. ಪಡುಮಲೆಯ ಕೋಟಿ ಚೆನ್ನಯ ಮೂಲಸ್ಥಾನದ ಬಗ್ಗೆ ವಿಧ್ವಾಂಸರು ಬರೆದಿರುವ ಕಥೆ ಎಲ್ಲರಿಗೂ ತಿಳಿದಿರುವ ವಾಸ್ತವ ಸಂಗತಿಯಾಗಿದ್ದರೂ ಅದನ್ನು ಕೆಲವು ಮಂದಿ ಸ್ವಾರ್ಥಕ್ಕಾಗಿ ವಾಸ್ತವ ಸಂಗತಿಗಳನ್ನು ಬಿಟ್ಟು ಕಥೆಗಳನ್ನು ತಿರುಚುವ ಕೆಲಸ ಆಗಿದೆ. ಹೀಗಾಗಿ ಟ್ರಸ್ಟ್ ಮೂಲಕ ಪಡುಮಲೆಯ ಕುರಿತು ಜನತೆಗೆ ಸರಿಯಾದ ಮಾಹಿತಿ ನೀಡಿ, ಕಥೆಗೆ ನ್ಯಾಯ ಒದಗಿಸುವ ಕೆಲಸವನ್ನು ಫಲಾಪೇಕ್ಷೆಯಿಲ್ಲದೆ ನಿರ್ವಹಿಸಲಾಗುತ್ತಿದೆ. ಕೋಟಿ ಚೆನ್ನಯರು ಒಂದು ಜಾತಿಗೆ ಸೀಮಿತವಾಗಿರದೇ ಇದ್ದು ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ, ಊರವರ ಅಭಿಪ್ರಾಯದಂತೆ ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಕಂಕನಾಡಿ ಗರಡಿಯ ಚಿತ್ತರಂಜನ್ ಎರಡು ವರ್ಷಗಳ ಹಿಂದೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡುವಂತೆ ಸಂಸದರಿಗೆ ಮನವಿ ಮಾಡಿದ್ದರು. ಹೆಸರಿಡುವುದು ಹೋರಾಟದಿಂದ ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಈ ಕಾರ್ಯ ನಡೆಯಬೇಕಿದ್ದು ಈ ಕೆಲಸ ಕಾರ್ಯಗಳು ಶೇ.90ರಷ್ಟು ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ಸಂಚಲನಾ ಟ್ರಸ್ಟ್‍ನ ಆಡಳಿತ ಮೊಕ್ತೇಸರರಾಗಿರುವ ಬಹುಭಾಷಾ ಚಿತ್ರನಟ ವಿನೋದ್ ಆಳ್ವ ಮಾತನಾಡಿ, ಬಹಳಷ್ಟು ಚಲನಚಿತ್ರ, ಧಾರಾವಾಹಿ ಹಾಗೂ ಯಕ್ಷಗಾನಗಳಲ್ಲಿ ಪಡುಮಲೆಯಲ್ಲಿಯೇ ಕೋಟಿ ಚೆನ್ನಯರ ಮೂಲಸ್ಥಾನ ಹಾಗೂ ಜನ್ಮಸ್ಥಾನಗಳು ಇರುವ ಬಗ್ಗೆ ಉಲ್ಲೇಖವಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಊರಿನ ಎಲ್ಲಾ ಜಾತಿ, ಧರ್ಮದವರು ಸಹಕಾರ ಪ್ರೋತ್ಸಾಹ ನೀಡಿದ್ದಾರೆ. ಮೂಲಸ್ಥಾನ ಹಾಗೂ ಜನ್ಮಸ್ಥಾನದ ಅಭಿವೃದ್ಧಿಯ ಕುರಿತು ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕೋಟಿ ಚೆನ್ನಯರ ಆರಾಧ್ಯ ದೈವ ದೇವರ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶ ನಡೆಸಿ ಬಳಿಕ ಜನ್ಮಸ್ಥಾನ ಹಾಗೂ ಇತರ ಐತಿಹ್ಯ ಸ್ಥಳಗಳ ಅಭಿವೃದ್ಧಿ ನಡೆಸಲಾಗುವುದು. ಈಗ ಪ್ರಾರಂಭಿಕ ಹಂತದ ಕಾಮಗಾರಿಗಳು ಶೇ.90ರಷ್ಟು ಪೂರ್ಣಗೊಂಡಿದೆ. ರಸ್ತೆ ಹಾಗೂ ಇತರ ಕೆಲಸಗಳು ಪ್ರಗತಿಯಲ್ಲಿದೆ. ಜನವರಿಯಲ್ಲಿ ಸಂಚಲನಾ ಸಮಿತಿ ಕಚೇರಿ ಉದ್ಘಾಟನೆಗೊಳ್ಳಲಿದೆ. ಮೂಲಸ್ಥಾನದ ಒಟ್ಟು ಅಭಿವೃದ್ಧಿಯಲ್ಲಿ ಶೇ.10ರಷ್ಟು ಕೆಲಸಗಳು ಪೂರ್ಣಗೊಂಡಿದೆ ಎಂದು ಹೇಳಿದರು.

ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕೋಟಿ ಚೆನ್ನಯ ಮೂಲಸ್ಥಾನ ಹಾಗೂ ಜನ್ಮಸ್ಥಾನಗಳ ಕುರಿತ ತಪ್ಪು ಸುದ್ದಿಗಳು ಅಳಿಸಿ ಹೋಗಲಿ. ಜನ್ಮ ಸ್ಥಾನದ ಸತ್ಯ ವಿಚಾರಗಳು ಜನತೆಗೆ ತಿಳಿಯಬೇಕು. ಪುತ್ತೂರಿನ ಜನತೆ ಸದಾ ಟ್ರಸ್ಟ್‍ಗೆ ಸಹಕಾರ ನೀಡಲಿದ್ದಾರೆ. ಐತಿಹಾಸಿಕ ಕ್ಷೇತ್ರಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ಯಶಸ್ವಿಯಾಗಿ ನಡೆಯಲಿ. ವಿಶ್ವಕ್ಕೆ ಶಾಂತಿ, ಸೌಹಾರ್ಧತೆಯ ಸಂದೇಶ ಕೊಡುವಂತಾಗಲಿ ಎಂದು ಹಾರೈಸಿದರು.

ದೇಶ ವಿದೇಶಾದ್ಯಂತ ಆರಾಧಿಸಲ್ಪಡುತ್ತಿರುವ ಅವಳಿ ವೀರರೂ ಕಾರಣಿಕ ಪುರುಷರೂ ಆಗಿರುವ ಕೋಟಿ ಚೆನ್ನಯರ ಮೂಲಸ್ಥಾನವಾದ ಬಡಗನ್ನೂರು ಗ್ರಾಮದ ಪಡುಮಲೆಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಸಮಸ್ತ ಹಿಂದೂ ಸಮಾಜದ ಕಾರ್ಯವನ್ನಾಗಿಸಲು ಯೋಜನೆ ರೂಪಿಸಲಾಗಿದೆ ಎಂದು ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‍ನ ಪ್ರಮುಖರು ಸಭೆಯಲ್ಲಿ ಘೋಷಿಸಿದರು. ಈ ವೇಳೆ ಸಭೆಯಲ್ಲಿದ್ದವರು ಚಪ್ಪಾಳೆ ಮೂಲಕ ಬೆಂಬಲ ಸೂಚಿಸಿದರು. ಮಾನವರಾಗಿ ಹುಟ್ಟಿ ಸತ್ಯ, ಧರ್ಮ, ನ್ಯಾಯಕ್ಕಾಗಿ ಹೋರಾಡಿ ಅಮರರಾಗಿರುವ ಕೋಟಿ ಚೆನ್ನಯರ ಕಾರ್ಯಕ್ರಮವನ್ನು ಯಾವುದೇ ಜಾತಿಗೆ, ಪಕ್ಷಕ್ಕೆ ಸೀಮಿತಗೊಳಿಸುವುದಿಲ್ಲ, ಎಲ್ಲಾ ವರ್ಗದವರನ್ನೂ ಸೇರಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದ ಪ್ರಮುಖರು ಪಡುಮಲೆಯ ಬ್ರಹ್ಮಕಲಶೋತ್ಸವವನ್ನು ಯಶಸ್ಸುಗೊಳಿಸುವ ಪ್ರಮುಖ ಜವಾಬ್ದಾರಿ ಕೋಟಿ ಚೆನ್ನಯರು ಹುಟ್ಟಿ ಬಾಳಿ ಬದುಕಿದ ಪುತ್ತೂರು ತಾಲೂಕಿನವರಿಗೆ ಜಾಸ್ತಿ ಇದೆ ಎಂದು ಹೇಳಿದರು.
ಮೂಲಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಪ್ರಥಮ ಹಂತವಾಗಿ ಕೋಟಿ ಚೆನ್ನಯರ ಮೂಲ ಸ್ಥಾನದಲ್ಲಿ ನಾಗಬೆರ್ಮರಗುಡಿ, ತೀರ್ಥಬಾವಿ, ರಕ್ತೇಶ್ವರಿ ಗುಡಿ ಹಾಗೂ ದೇಯಿ ಬೈದೆತಿ ಸಮಾಧಿಯ ಶಿಲಾಮಯ ಸಾನಿಧ್ಯಗಳು ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಜ.14ರಂದು ಕಚೇರಿ ಉದ್ಘಾಟನೆಗೊಂಡು ಏಪ್ರಿಲ್‍ನಲ್ಲಿ ಬ್ರಹ್ಮಕಲಶ ನಡೆಯಲಿದೆ. ತಿರುಮಲೆ, ಶಬರಿಮಲೆಯಂತೆ ಪಡುಮಲೆಯೂ ಬೆಳಗಬೇಕು ಎಂಬ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಅಶಯವನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸಭೆಯಲ್ಲಿ ಟ್ರಸ್ಟ್‍ನ ಪ್ರಮುಖರು ಹೇಳಿದರು.
ಪಡುಮಲೆಯ ಬ್ರಹ್ಮಕಲಶೋತ್ಸವ ಮುಂದಿನ ಎಪ್ರಿಲ್ ತಿಂಗಳಿನಲ್ಲಿ ನಡೆಯಲಿದ್ದು ಇದಕ್ಕೆ ಪೂರಕವಾಗಿ ಪಡುಮಲೆಯಲ್ಲಿ ಆಡಳಿತ ಕಚೇರಿ, ಅತಿಥಿಗೃಹ ಹಾಗೂ ವಿಶ್ರಾಂತಿ ಕೊಠಡಿಗಳ ಉದ್ಘಾಟನೆ ಜನವರಿ 14ರ ಮಕರ ಸಂಕ್ರಮಣದಂದು ನಡೆಯಲಿದೆ ಎಂದು ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಯಿತು.

ಪಡುಮಲೆಯ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿ ತಾಲೂಕು ಸಮಿತಿ ಹಾಗೂ ತಾಲೂಕಿನಲ್ಲಿ ಆರು ವಲಯಗಳನ್ನು ರಚಿಸಲಾಗಿದೆ. ತಾಲೂಕು ಸಮಿತಿಯ ಅಧ್ಯಕ್ಷರಾಗಿ ತಾಲೂಕು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷ ವೇದನಾಥ ಸುವರ್ಣ ನರಿಮೊಗರು, ಪುತ್ತೂರು ವಲಯದ ಅಧ್ಯಕ್ಷರಾಗಿ ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ಉಪ್ಪಿನಂಗಡಿ ವಲಯದ ಅಧ್ಯಕ್ಷರಾಗಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕುಂಬ್ರ ವಲಯದ ಅಧ್ಯಕ್ಷರಾಗಿ ಆರ್ಯಾಪು ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್, ಬಡಗನ್ನೂರು ವಲಯದ ಅಧ್ಯಕ್ಷರಾಗಿ ಮೋನಪ್ಪ ಪೂಜಾರಿ ಕಾವು, ನರಿಮೊಗರು ವಲಯದ ಅಧ್ಯಕ್ಷರಾಗಿ ಸತೀಶ್ ಕುಮಾರ್ ಕೆಡೆಂಜಿ ಹಾಗೂ ಕಡಬ ವಲಯದ ಅಧ್ಯಕ್ಷರಾಗಿ ಸತೀಶ್ ಕುಮಾರ್ ಐತ್ತೂರುರವರ ಹೆಸರನ್ನು ಟ್ರಸ್ಟ್‍ನ ಉಪಾಧ್ಯಕ್ಷರಾದ ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ ಘೋಷಣೆ ಮಾಡಿದರು. ಗ್ರಾಮ ಪಂಚಾಯತ್ ಚುನಾವಣೆ ಮುಗಿದ ಬಳಿಕ ಗ್ರಾಮ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.

ಪಡುಮಲೆ ಕ್ಷೇತ್ರದ ಅಭಿವೃದ್ಧಿಗೆ ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಉಪ್ಪಿನಂಗಡಿ ಹಾಗೂ ಅವರ ಪುತ್ರ ಡಾ.ಆಶಿತ್‍ರವರು ರೂ.25,000ದೇಣಿಗೆಯನ್ನು ಟ್ರಸ್ಟ್‍ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‍ರವರಿಗೆ ವೇದಿಕೆಯಲ್ಲಿ ಹಸ್ತಾಂತರಿಸಿದರು.

ಟ್ರಸ್ಟ್‍ನ ಉಪಾಧ್ಯಕ್ಷ ಯೋಗೀಶ್ ಕುಮಾರ್ ಬೆಳ್ತಂಗಡಿ, ಮೊಕ್ತೇಸರ ರತನ್ ಕುಮಾರ್ ನಾೈಕ್ ಕರ್ನೂರು, ಕೊಟ್ಟಿಬೆಟ್ಟು ಏಳ್ನಾಡುಗುತ್ತು ಫ್ಯಾಮಿಲಿ ಟ್ರಸ್ಟ್‍ನ ಯಜಮಾನರಾದ ಪಿಡಬ್ಲ್ಯುಡಿ ಕಂಟ್ರಾಕ್ಟರ್ ರಾಧಾಕೃಷ್ಣ ನಾೈಕ್ ಉಪ್ಪಿನಂಗಡಿ, ಚಿಕ್ಕಮುಡ್ನೂರು ಆರಿಗ ಪೆರ್ಮುಂಡ ಗರಡಿಯ ಮೊಕ್ತೇಸರ ಡಾ.ಅಶೋಕ್ ಪಡಿವಾಳ್, ಪಾಪೆಮಜಲು ಗರಡಿಯ ಮುಖ್ಯಸ್ಥ ಮುಕುಂದ ಶಾಂತಿವನ, ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷರಾದ ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿ ನಿಯೋಜಿತ ಅಧ್ಯಕ್ಷ ಡಾ.ರಾಜರಾಮ್ ಕೆ.ಬಿ., ಕೆಮ್ಮಿಂಜೆ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಪ್ರಗತಿಪರ ಕೃಷಿಕ ಮೋನಪ್ಪ ಕರ್ಕೇರ ಮುಂಡೂರು, ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ, ಶ್ರೀನಿವಾಸ ಪೆರ್ವೋಡಿ, ಕೋಡಿಂಬಾಡಿ ಗ್ರಾ.ಪಂ ಮಾಜಿ ಸದಸ್ಯರಾದ ರಾಮಚಂದ್ರ ಪೂಜಾರಿ ಶಾಂತಿನಗರ, ಜಯಪ್ರಕಾಶ್ ಬದಿನಾರು, ಕಲಾವಿದ ಕೃಷ್ಣಪ್ಪ, ಕಬಕ ಗ್ರಾ.ಪಂ ಮಾಜಿ ಸದಸ್ಯ ಬಾಲಕೃಷ್ಣ ಪೂಜಾರಿ ಪಲ್ಲತ್ತಾರು ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ವಿಜಯ ಕುಮಾರ್ ಸೊರಕೆ ಸ್ವಾಗತಿಸಿದರು. ಶೇಖರ್ ನಾರಾವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

Leave a Reply

Your email address will not be published. Required fields are marked *