Header Ads
Header Ads
Breaking News

’ಸಮಗ್ರ ಕೃಷಿ’ ಸಂತೃಪ್ತ ಬದುಕು ಕೃಷಿಗೆ ಮಾದರಿ ’ಕೆರೆಮಾರು’ ಕುಟುಂಬ

ಪುತ್ತೂರು; ಎರಡು ಎಕರೆ ಗದ್ದೆ, ಅಡಕೆ ತೋಟ, ಮಲ್ಲಿಗೆ ಕೃಷಿ, ನರ್ಸರಿ, ಹೈನುಗಾರಿಕೆ, ರಬ್ಬರ್ ಕೃಷಿ, ತರ ತರದ ತರಕಾರಿ ಕೃಷಿ ಹೀಗೆ ಇಲ್ಲಿ ಎಲ್ಲವೂ ಇದೆ. ಒಂದು ಸಮೃದ್ಧ ಕುಟುಂಬಕ್ಕೆ ಏನೆಲ್ಲಾ ಅಗತ್ಯವೋ ಅದೆಲ್ಲವನ್ನೂ ಮಾಡುವ ಮನಸ್ಸುಗಳು ಇಲ್ಲಿವೆ. ಯಾವುದಕ್ಕೂ ಇತರರನ್ನು ಆಶ್ರಯಿಸಬೇಕಾದ ಅಗತ್ಯವಿಲ್ಲ. ಇದರೊಂದಿಗೆ ಹರಿದು ಬರುವ ಆದಾಯದಿಂದ ಸಂತೃಪ್ತ ಬದುಕು ಕಟ್ಟಿಕೊಂಡಿರುವ ಕುಟುಂಬ ನಾಡಿನ ಕೃಷಿಕರಿಗೆ ಮಾದರಿಯಾಗಿ ನಿಂತಿದೆ.

ಇದು ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ಸಮೀಪ ಇರುವ ಕೆರೆಮಾರು ಮೋನಪ್ಪ ಪೂಜಾರಿಯವರ ಕುಟುಂಬದ ಸಾಧನೆ. ಕೃಷಿ ವ್ಯವಸ್ಥೆಯಿಂದ ದೂರ ಸರಿಯುತ್ತಿರುವ ಮಂದಿಯ ನಡುವೆ ಸಮಗ್ರ ಕೃಷಿ ಮೂಲಕ ಅಸಾಧಾರಣವನ್ನು ಸಾಧಿಸಿದ ಹಿರಿಮೆ ಇವರದ್ದಾಗಿದೆ.

ಎಸ್‌ಎಸ್‌ಎಲ್‌ಸಿ ಮುಗಿಸಿ ಜೆ‌ಓಸಿ ಕೋರ್ಸು ಮಾಡಿದ ಕೆರೆಮಾರು ಮೋನಪ್ಪ ಪೂಜಾರಿ ಅವರು ಮೊದಲು ಮಾಡಿದ ಕೆಲಸ ಖಾಸಗಿ ಬಸ್ಸೊಂದರಲ್ಲಿ ನಿರ್ವಾಹಕ. ಆದರೆ ಮನೆಯ ಕೃಷಿ ಅವನತಿಯತ್ತ ಸಾಗುತ್ತಿರುವುದನ್ನು ಕಂಡ ಇವರು ಮತ್ತೆ ಅಪ್ಪಟ ರೈತನಾಗಲು ಮುಂದಾದರು. ನೀರಿನ ಸಮಸ್ಯೆ ಇಲ್ಲದ ಭತ್ತದ ಗದ್ದೆಗಳಲ್ಲಿ ಭತ್ತ ಬೇಸಾಯ ಪ್ರಾರಂಭ ಮಾಡಿದರು. ಆದರೆ ಅಷ್ಟೇನೂ ಲಾಭದಾಯಕವಲ್ಲದ ಸಾಂಪ್ರದಾಯಿಕ ಭತ್ತದ ಬೆಳೆಯನ್ನು ಹೊಸ ಪದ್ಧತಿಯಲ್ಲಿ ಬೆಳೆಸುವ ಚಿಂತನೆ ಮಾಡಿದಾಗ ಶ್ರೀ ಭತ್ತದ ಪದ್ಧತಿ ಇವರ ನೆರವಿಗೆ ಬಂತು. ಇದೀಗ ಎಕರೆಗೆ ೨೫ ಕ್ವಿಂಟಾಲ್ ಭತ್ತ ಬೆಳೆಯುವ ಮೂಲಕ ಇದನ್ನೊಂದು ಲಾಭದಾಯಕ ಬೆಲೆಯನ್ನಾಗಿಸುವಲ್ಲಿ ಸಫಲರಾದರು.

ಸಾಮಾನ್ಯವಾಗಿ ನಾಡಿನ ರೈತರು ಏಣೇಲು ಹಾಗೂ ಸುಗ್ಗಿ ಬೆಳೆಯನ್ನು ಜಾಸ್ತಿ ಬೆಳೆಸುತ್ತಾರೆ. ಆದರೆ ಕೆರೆಮಾರು ಮೋನಪ್ಪ ಪೂಜಾರಿಯವರು ಇಲ್ಲೂ ಬದಲಾವಣೆ ತಂದರು. ಕೇವಲ ಏಣೇಲು ಬೆಳೆ ಮಾತ್ರ ತೆಗೆದು ಸುಗ್ಗಿ ಬೆಳೆಯ ಸಂದರ್ಭದಲ್ಲಿ ಅದೇ ಗದ್ದೆಯಲ್ಲಿ ತರಕಾರಿ ಬೆಳೆಯ ತೊಡಗಿದರು. ಅಲಸಂಡೆ, ಚೀನಿಕಾಯಿ, ಬೆಂಡೆ, ತೊಂಡೆಕಾಯಿ ಹೀಗೆ ತರ ತರದ ತರಕಾರಿಗಳನ್ನು ಬೆಳೆಸಲಾರಂಭಿಸಿದರು. ಇದೇ ತರಕಾರಿ ಕೃಷಿಯಿಂದ ವಾರ್ಷಿಕವಾಗಿ ರೂ. 1 ರಿಂದ 1.50 ಲಕ್ಷ ಆದಾಯ ಇವರ ಕೈ ಸೇರತೊಡಗಿತು. ಇದರೊಂದಿಗೆ ಮಲ್ಲಿಗೆ ಕೃಷಿಯನ್ನೂ ಆರಂಭ ಮಾಡಿದರು. ಇದರಿಂದ ರೂ. 2.50 ಲಕ್ಷ ನಿವ್ವಳ ಲಾಭ ಪಡೆಯುತ್ತಾರೆ. ಮನೆಯ ಪಕ್ಕದಲ್ಲಿರುವ ಗುಡ್ಡದಲ್ಲಿ 300 ರಬ್ಬರ್ ಗಿಡ ಬೆಳೆಸಿದರು. ನರ್ಸರಿಯ ಮೂಲಕ ಅಡಕೆ ಗಿಡ ಹಾಗೂ ಮಲ್ಲಿಗೆ ಗಿಡಗಳನ್ನು ಮಾಡಿ ಮಾರಾಟ ಮಾಡಲೂ ಮುಂದಾದರು. ಇದು ವಾರ್ಷಿಕವಾಗಿ ರೂ. 1 ಲಕ್ಷ ಆದಾಯವನ್ನು ಇವರ ಜೇಬಿಗೆ ತಂದಿತು. 1200 ಅಡಕೆ ಮರ, ದಿನವೊಂದಕ್ಕೆ 12 ಲೀಟರ್ ಹಾಲು ಮಾರಾಟ ಇದೆಲ್ಲವನ್ನೂ ಮಾಡಿ ವರ್ಷಕ್ಕೆ ಕಡಿಮೆ ಎಂದರೂ ರೂ. 10 ಲಕ್ಷ ಆದಾಯ ಕೆರೆಮಾರು ಅವರ ಕುಟುಂಬಕ್ಕೆ ದೊರೆಯುತ್ತಿದೆ.

ಒಂದು ಕಾಲದಲ್ಲಿ ಖಾಸಗಿ ಬಸ್ಸು ನಿರ್ವಾಹಕನಾಗಿ ತಿಂಗಳಿಗೆ 3 ಸಾವಿರ ಗಳಿಸುತ್ತಿದ್ದ ಕೆರೆಮಾರು ಮೋನಪ್ಪ ಪೂಜಾರಿಯವರು ಈಗ ತನ್ನ ಸ್ವಂತ ದುಡಿಮೆಯನ್ನು 10 ಲಕ್ಷಕ್ಕೆ ಏರಿಸಿಕೊಂಡು ಒಂದಷ್ಟು ಮಂದಿಗೆ ಕೆಲಸ ನೀಡಲೂ ಸಿದ್ಧರಾಗಿದ್ದಾರೆ. ಇದರೊಂದಿಗೆ ಪುಟ್ಟದೊಂದು ಅಂಗಡಿಯನ್ನೂ ಮಾಡಿಕೊಂಡಿದ್ದಾರೆ. ಕಳೆದ 20 ವರ್ಷಗಳ ಅವಧಿಯಲ್ಲಿ ಗ್ರಾಮಪಂಚಾಯತ್ ಸದಸ್ಯರಾಗಿ ಸಾರ್ವಜನಿಕ ಜೀವನದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.


ಪ್ರಸ್ತುತ ಗ್ರಾಮಪಂಚಾಯತ್ ಸದಸ್ಯೆಯಾಗಿರುವ ಇವರ ಪತ್ನಿ ಸರೋಜಿನಿಯವರ ಪಾತ್ರವೂ ಇದರಲ್ಲಿ ಅತ್ಯಂತ ಮಹತ್ತರವಾದದ್ದು. ಮಲ್ಲಿಗೆ ಕೃಷಿ ಹಾಗೂ ಹೈನುಗಾರಿಕೆಯ ಜವಾಬ್ದಾರಿಯನ್ನು ಸಂಪೂರ್ಣ ನಿರ್ವಹಿಸಿಕೊಂಡು ಪತಿಯ ಎಲ್ಲಾ ಚಟುವಟಿಕೆಗಳಿಗೂ ಬೆನ್ನೆಲುಬಾಗಿ ನಿಂತ ಇವರು ಅಪ್ಪಟ ಗೃಹಿಣಿ. ಒಂದೇ ಮನೆಯಲ್ಲಿ ಇಲ್ಲದಿದ್ದರೂ ಅವಿಭಕ್ತ ಕುಟುಂಬವಾಗಿರುವ ಅಣ್ಣತಮ್ಮಂದಿರೆಲ್ಲಾ ಇವತ್ತಿಗೂ ಒಂದಾಗಿ ದುಡಿಯುವ ಮೂಲಕ ಕೆರೆಮಾರು ಕುಟುಂಬದ ಇವತ್ತಿನ ಸಾಧನೆಗೆ ಊರುಗೋಲಾಗಿದ್ದಾರೆ. ಮಗಳು ಮಾನಸಳಿಗ