Header Ads
Breaking News

ಸರಕಾರಿ ಶಾಲೆಗೆ ಖಾಸಗಿ ಶಾಲೆಯ ಸ್ಪರ್ಶ : ಶಿಥಿಲಾವಸ್ಥೆಯಲ್ಲಿದ್ದ ಶಾಲೆಯನ್ನು ಪುನಶ್ಚೇತನ

ಮೂಡುಬಿದಿರೆ : ಮಾಸಿ ಹೋಗಿದ್ದ ಹಳದಿ ಮತ್ತು ಕಪ್ಪು ಬಣ್ಣದೊಂದಿಗೆ, ಕಿಟಗಿ ಬಾಗಿಲುಗಳು ಕಿತ್ತು ಬರುವಂತೆ ಶಿಥಿಲಾವಸ್ಥೆಯಲ್ಲಿದ್ದ ಸರಕಾರಿ ಶಾಲೆಯನ್ನು ಊರಿನ ಗ್ರಾಮಸ್ಥರು ಸೇರಿ ಬಿಳಿ ಮತ್ತು ಸಿಮೆಂಟ್ ಬಣ್ಣವನ್ನು ಬಳಿದು, ಕಿತ್ತು ಬರುವಂತಹ ಸ್ಥಿತಿಯಲ್ಲಿದ್ದ ಕಟ್ಟಡದ ಸಾಮಾಗ್ರಿಗಳನ್ನು ಬದಲಾಯಿಸಿ ಖಾಸಗಿ ಶಾಲೆಯ ಸ್ಪರ್ಶವನ್ನು ನೀಡಿ ಪುನಶ್ಚೇತನಗೊಳಿಸಿದ ಮಾದರಿ ಕಾರ್ಯ ಮೂಡುಬಿದಿರೆ ತಾಲೂಕಿನ ಅಳಿಯೂರಿನಲ್ಲಿ ನಡೆದಿದೆ.

ಮೂಡುಬಿದಿರೆ ತಾಲೂಕಿನ ಅಳಿಯೂರಿನಲ್ಲಿ 85 ವರ್ಷಗಳ ಹಿಂದೆ ಆರಂಭಗೊಂಡಿದ್ದ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಳಿಯೂರು” ಸುಮಾರು 20,000 ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಿದ ಶಿಕ್ಷಣ ಸಂಸ್ಥೆ. ಮೊದಮೊದಲಿಗೆ ಹೆಚ್ಚಿನ ಮಕ್ಕಳನ್ನು ಹೊಂದಿದ್ದ ಈ ಶಾಲೆ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಯಾಗುತ್ತಾ ಬಂದಿತ್ತಲ್ಲದೆ. ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿತ್ತು. ಇದನ್ನು ಗಮನಿಸಿದ ಊರಿನ ಗಣ್ಯರು ಮತ್ತು ಶಿಕ್ಷಣ ಪ್ರೇಮಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಚಿಂತನೆಯನ್ನು ನಡೆಸಿ “ಸಮನ್ವಯ ವೇದಿಕೆ”ಯೊಂದನ್ನು ರಚಿಸಿ ಎರಡು ವರ್ಷಗಳ ಹಿಂದೆ ಸರಕಾರಿ ಶಾಲೆಯಲ್ಲಿ ಎಲ್‍ಕೆಜಿ ಯುಕೆಜಿಯನ್ನು ಆರಂಭಿಸಿ ಇಂಗ್ಲೀಷ್ ಮಾಧ್ಯಮಕ್ಕಾಗಿ ಬೇರೆ ಶಾಲೆಗಳಿಗೆ ಹಂಚಿ ಹೋಗುತ್ತಿದ್ದ ಮಕ್ಕಳನ್ನು ಇಲ್ಲಿಗೆ ಬರುವಂತೆ ಮಾಡಲಾಯಿತು.
ಮಕ್ಕಳನ್ನು ಸೆಳೆಯಬೇಕಾದರೆ ಶಾಲೆಯ ಕಟ್ಟಡವೂ ಖಾಸಗಿ ಶಾಲೆಯಂತೆ ಆಕರ್ಷಕವಾಗಿದ್ದರೆ ಇನ್ನೂ ಒಳಿತು ಎಂಬುದನ್ನು ಮನಗಂಡ “ಸಮನ್ವಯ ವೇದಿಕೆ”ಯು ಲಾಕ್‍ಡೌನ್ ಸಮಯದಲ್ಲಿ ದಾನಿಗಳ ಸಹಕಾರ ಮತ್ತು ಶ್ರಮದಾನದ ಮೂಲಕ ಶಾಲೆಗೆ ಸುಣ್ಣಬಣ್ಣ ಬಳಿಯುವ ಕೆಲಸಕ್ಕೆ ಕೈ ಹಾಕಿತ್ತು. ಈ ಸಂದರ್ಭದಲ್ಲಿ ಶಾಲೆಯ ಕಟ್ಟಡವೂ ಶಿಥಿಲಗೊಂಡು ಮಳೆಯ ನೀರು ಒಳಗಡೆ ಸೋರುತ್ತಿರುವ ಬಗ್ಗೆ ಸಮಿತಿಯ ಗಮನಕ್ಕೆ ಬಂದಿತ್ತು. ಇದರ ಬಗ್ಗೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರ ಗಮನಕ್ಕೆ ತಂದಾಗ ತಾವು ರಿಪೇರಿ ಕಾರ್ಯವನ್ನು ಆರಂಭಿಸಿ ನಾನು ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು. ಅದರಂತೆ 85 ವರ್ಷದ ಇತಿಹಾಸವಿರುವ ಶಾಲೆಯನ್ನು ಅಭಿವೃದ್ಧಿಗೊಳಿಸಲು ಗ್ರಾಮಸ್ಥರು ಮುಂದಾದರು.
ಲಾಕ್‍ಡೌನ್ ಸಂದರ್ಭದಲ್ಲಿ ಊರಿನ ವಿವಿಧ ಸಂಘಟನೆಗಳಾದ ಕೋಟಿ-ಚೆನ್ನಯ ಯುವ ಶಕ್ತಿ, ಹಳೆ ವಿದ್ಯಾರ್ಥಿಗಳು, ಆಟೋ ಚಾಲಕ-ಮಾಲಕರ ಸಂಘ, ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪೋಷಕರು ಹನುಮಾನ್ ಫ್ರೆಂಡ್ಸ್‍ನ ಸುಮಾರು 800ರಷ್ಟು ಜನರು ಸೇರಿಕೊಂಡು ನಾಲ್ಕೂವರೆ ಲಕ್ಷದ ಅಭಿವೃದ್ಧಿ ಕಾರ್ಯವನ್ನು ಮಾಡಿದರು. ಧ್ವಜ ಸ್ಥಂಭ, ಉಗ್ರಾಣ ಕೊಠಡಿ, ಸ್ಪೋಟ್ರ್ಸ್ ಕೊಠಡಿ, ಶಿಕ್ಷಕರ ಸಂಖ್ಯೆ ಹೆಚ್ಚಿರುವುದರಿಂದ ಅಟಾಚ್ ಬಾತ್‍ರೂಮಿನೊಂದಿಗೆ ಕೊಠಡಿಯನ್ನು ರಚಿಸಲಾಗಿದ್ದು ಸಮನ್ವಯ ಸಮಿತಿಯಿಂದ ಈಗಾಗಲೇ 7ಲಕ್ಷ ವೆಚ್ಚದ ಕಾಮಗಾರಿಗಳು ನಡೆದಿವೆ.

Related posts

Leave a Reply

Your email address will not be published. Required fields are marked *