
ಉದ್ಘಾಟನೆಗೆ ಸಿದ್ಧವಾಗಿರುವ ಬಂಟ್ವಾಳ ತಾಲೂಕಿನ ಸರಪಾಡಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಘಟಕಕ್ಕೆ ಇಂದು ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ನೀರಿನ ಘಟಕದ ಒಳಗೆ ಪ್ರವೇಶಿಸಲು ಬಿಡದೆ ಅಡ್ಡಿಪಡಿಸಿದ ಘಟನೆ ನಡೆದಿದೆ.ಸರಪಾಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ರಮಾನಾಥ ರೈ ಸಚಿವರಾಗಿದ್ದ ಸಂದರ್ಭದಲ್ಲಿ 33.15 ಕೋಟಿ ರೂ. ಅನುದಾನ ಒದಗಿಸಿದ್ದರು. ಇದೀಗ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು ಜನವರಿ 31ರಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಆದರೆ ಉದ್ಘಾಟನಾ ಕಾರ್ಯಕ್ರಮಕ್ಕೆ ರಮಾನಾಥ ರೈ ಅವರಿಗೆ ಆಹ್ವಾನ ನೀಡಿಲ್ಲ ಎನ್ನಲಾಗಿದೆ.
ಈ ನಡುವೆ ನೀರಿನ ಘಟಕಕ್ಕೆ ರಮಾನಾಥ ರೈ ಅವರು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯತ್ ಸದಸ್ಯರ ಸಹಿತ ಹಲವು ಪ್ರಮುಖರೊಂದಿಗೆ ಇಂದು ಭೇಟಿ ನೀಡಿ ಪರಿಶೀಲನೆ ಮುಂದಾದರು.
ಈ ಸಂದರ್ಭದಲ್ಲಿ ರಮಾನಾಥ ರೈಯವರನ್ನು ಘಟಕದ ಒಳಗೆ ಬಿಡಲು ಪೊಲೀಸ್ರು ಅವಕಾಶ ನಿರಾಕರಿಸಿದರು. ಸಂಬಂಧಿಸಿದ ಇಂಜಿನಿಯರ್ ಅವರ ಅನುಮತಿ ಇಲ್ಲದೆ ಘಟಕದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗದು ಎಂದುಪೊಲೀಸ್ರು ಹೇಳಿದರಿಂದ ರಮಾನಾಥ ರೈ, ತಾಲೂಕು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ್ ಜೈನ್ ಸಹಿತ ಹಲವರು ಸ್ಥಳದಲ್ಲಿ ಧರಣಿ ಕುಳಿತ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷ, ನಾಯಕರಿಗೆ ಜೈಕಾರ ಘೋಷಣೆ ಕೂಗಿದರೆ, ಎರಡೂ ಪಕ್ಷದವರು ತಮ್ಮ ವಿರೋಧ ಪಕ್ಷಗಳ ನಾಯಕರಿಗೆ ಧಿಕ್ಕಾರ ಘೋಷಣೆ ಕೂಗುತ್ತಿದ್ದಾರೆ. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.