Header Ads
Breaking News

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು

ಬಂಟ್ವಾಳ, : ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.

ಶಿಲಾನ್ಯಾಸ ನೆರವೇರಿಸಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ದೇವಾಲಯಗಳ ನಿರ್ಮಾಣದ ಸಂದರ್ಭದಲ್ಲಿ ಊರಿನ ಭಕ್ತರು ಶುದ್ಧತೆಯನ್ನು ಕಾಪಾಡಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಯಾವುದೇ ರಾಜಕೀಯವನ್ನು ಕ್ಷೇತ್ರಕ್ಕೆ ತರಬಾರದು. ಇಂತಹ ಧಾರ್ಮಿಕ ತಾಣಗಳ ಉದ್ಧಾರದಿಂದ ದೇಶದಲ್ಲಿನ ಆತಂಕವಾದ ದೂರವಾಗಿ ಸುಭೀಕ್ಷೆ ನೆಲೆಸಲಿ. ಜತೆಗೆ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಶೀಘ್ರ ನೆರವೇರಲಿ ಎಂದು ಶ್ರೀ ಮೋಹನದಾಸ ಸ್ವಾಮೀಜಿಯವರು ಅಶೀರ್ವಚನ ನೀಡಿದರು.
ಮುಖ್ಯ ಅತಿಥಿ ದಿವ್ಯರೂಪ ಕನ್‌ಸ್ಟ್ರಕ್ಷನ್‌ನ ಮಾಲಕ ಯಾದವ ಕೋಟ್ಯಾನ್ ಪೆರ್ಮುದೆ ಮಾತನಾಡಿ, ದೇವಾಲಯಗಳ ನಿರ್ಮಾಣದಲ್ಲಿ ಪರವೂರಿಗಿಂತಲೂ ಊರಿನ ಭಕ್ತರ ಸಹಕಾರ ವಿಶೇಷವಾಗಿರುತ್ತದೆ. ಊರವರು ಒಗ್ಗಟ್ಟಾದಾಗ ಯಾವುದೇ ಕಾರ್ಯ ಸುಸೂತ್ರವಾಗಿ ನೆರವೇರಲಿದೆ ಎಂದು ಕ್ಷೇತ್ರಕ್ಕೆ ಸಹಕಾರದ ಭರವಸೆ ನೀಡಿದರು.

ಕ್ಷೇತ್ರದ ತಂತ್ರಿಗಳಾದ ದಿನೇಶಕೃಷ್ಣ ತಂತ್ರಿ ವರ್ಕಾಡಿ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಪುರೋಹಿತ ವಿಜಯಕೃಷ್ಣ ಐತಾಳ ಹಾಗೂ ಅರ್ಚಕರಾದ ಶಂಕರನಾರಾಯಣ ಹೊಳ್ಳ, ಜಯರಾಮ ಕಾರಂತ ಅವರು ಸಹಕರಿಸಿದರು.

ಪ್ರಾರಂಭದಲ್ಲಿ ಶಿಲೆಕಲ್ಲನ್ನು ಶಾಂತಿಗುಡ್ಡೆಯಿಂದ ಮೆರವಣಿಗೆಯ ಮೂಲಕ ತರಲಾಯಿತು. ಬಳಿಕ ಬಾಲಾಲಯದ ಮುಂಭಾಗ ಪ್ರಾರ್ಥನೆ ನೆರವೇರಿಸಿ ಶಿಲಾನ್ಯಾಸ ನಡೆಸಲಾಯಿತು. ವಾಸ್ತುಶಿಲ್ಪಿ ಮಹೇಶ್ ಭಟ್ ಮುನಿಯಂಗಳ ಶುಭಹಾರೈಸಿದರು.

ಅತಿಥಿಗಳಾಗಿ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಸರಪಾಡಿ ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ಧರ್ಣಪ್ಪ ಪೂಜಾರಿ, ಮಣಿನಾಲ್ಕೂರು ಗ್ರಾ.ಪಂ.ಆಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ, ಮಣಿನಾಲ್ಕೂರು ಸಿಎ ಬ್ಯಾಂಕ್ ಅಧ್ಯಕ್ಷ ರಾಧಾಕೃಷ್ಣ ಮಯ್ಯ ಮೊದಲಾದವರು ಭಾಗವಹಿಸಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಕ್ಷೇತ್ರದ ಮೊಕ್ತೇಸರರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply

Your email address will not be published. Required fields are marked *