Header Ads
Breaking News

ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವಲ್ಲಿ ಇಚ್ಚಾಶಕ್ತಿ ಕೊರತೆ

ಬಂಟ್ವಾಳ: ದೇಶದ ಜನರ ಹಿತಕ್ಕಾಗಿ ಕೇಂದ್ರ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೆ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧೀನ ವ್ಯವಸ್ಥೆಗಳ ಲೋಪದೋಷ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯೋಜನೆಗಳು ಫಲಾನುಭವಿಗಳನ್ನು ತಲುಪಲು ಸಾದ್ಯವಾಗುತ್ತಿಲ್ಲ. ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸ್ವ ಉದ್ಯೋಗ ಯೋಜನೆಯಡಿ ಬ್ಯಾಂಕ್ ಸಾಲ ಪಡೆದು ಯುವ ಉದ್ಯಮಿಗಳು ತಮ್ಮ ವ್ಯವಹಾರ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಸರಕಾರ ಅವಕಾಶ ಕಲ್ಪಿಸಿದ್ದರೂ ಬ್ಯಾಂಕ್ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಸಣ್ಣ ಕೈಗಾರಿಕೋದ್ಯಮಿಗಳಿಗೆ ಸಾಲ ಪಡೆಯಲು ಸಾಧ್ಯವಾಗದ ಯೋಜನೆ ವಿಫಲವಾಗುತ್ತಿದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

ಮಡಂತ್ಯಾರಿನಲ್ಲಿ ರೂಪಶ್ರೀ ಗಾಮೆರ್ಂಟ್ಸ್ ನಡೆಸುತ್ತಿರುವ ಯುವ ಉದ್ಯಮಿ ಗಂಗಾಧರ ಪೂಜಾರಿಯವರು ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಬೇಕು, ಇನ್ನಷ್ಟು ಮಂದಿ ಮಹಿಳೆಯರಿಗೆ ಉದ್ಯೋಗ ನೀಡಬೇಕು ಆ ಮೂಲಕ ದೇಶದ ಆರ್ಥಿಕತೆ, ಜಿಡಿಪಿಗೆ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸ್ವ ಉದ್ಯೋಗ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ತಾನು ಕಳೆದ 18 ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಮಡಂತ್ಯಾರಿನ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಒಂದು ವರ್ಷದಿಂದ ಸಾಲ ಪಡೆಯಲು ಅಲೆದಾಡುತ್ತಿದ್ದು ಬ್ಯಾಂಕ್ ಸಿಬ್ಬಂದಿಗಳು ಸಾಲ ನೀಡಲು ಸತಾಯಿಸುತ್ತಿದ್ದಾರೆ. ಈ ಸಂಬಂಧ ಬ್ಯಾಂಕಿನ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಬ್ಯಾಂಕಿನ ಈ ಧೋರಣೆಯನ್ನು ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಬ್ಯಾಂಕ್ ಮ್ಯಾನೇಜರ್ ಕ್ಯಾರೇ ಎಂದಿಲ್ಲ. ಸಣ್ಣ ಉದ್ಯಮ ನಡೆಸುವ ಉದ್ಯಮಿಗಳ ಅನುಕೂಲಕ್ಕಾಗಿ ಸರಕಾರ ಯೋಜನೆ ರೂಪಿಸಿದರೂ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದಾಗಿ ಗಂಗಾಧರ ಪೂಜಾರಿಯವರಂತೆ ಹಲವು ಮಂದಿ ಯುವ ಉದ್ಯಮಿಗಳು ತೊಂದರೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ಬ್ಯಾಂಕ್ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಗಂಗಾಧರ ಪೂಜಾರಿ ಅಳಲು ತೋಡಿಕೊಂಡಿದ್ದಾರೆ. ಸಣ್ಣ ಉದ್ಯಮಿಗಳಿಗೆ ನೆರವಾಗುವ ಬದಲು ಸಾಲ ನೀಡಲು ಅಡ್ಡಿ ಪಡಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ಧೋರಣೆಯನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *