Header Ads
Breaking News

ಸರ್ಕಾರಿ ವೃತ್ತಿಯಲ್ಲಿದ್ದರೂ ಜೇನು ಕೃಷಿಯಲ್ಲಿ ತೊಡಗಿಕೊಂಡ ಕೃಷಿಕ : ಯಶಸ್ವಿ ಜೇನು ಕೃಷಿಕರಾದ ಕರ್ತಡ್ಕದ ಕೆ. ಲಕ್ಷ್ಮಣಗೌಡ

ಬಂಟ್ವಾಳ: ಸರಕಾರಿ ಕೆಲಸದಲ್ಲಿರುವವರು ತಮ್ಮ ನಿವೃತ್ತಿ ಜೀವನದ ಬಳಿಕ ಕೃಷಿ ಮತ್ತಿತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಸರಕಾರಿ ವೃತ್ತಿಯಲ್ಲಿದ್ದರೂ ಜೇನು ಕೃಷಿಯನ್ನು ತನ್ನ ಪ್ರವೃತ್ತಿಯನ್ನಾಗಿ ಬೆಳೆಸಿಕೊಂಡು ಯಶಸ್ಸು ಕಂಡುಕೊಂಡಿದ್ದಾರೆ. ಬಾಲ್ಯದಿಂದಲೂ ಜೇನು ಕೃಷಿಯೊಂದಿಗಿನ ಒಡನಾಟ ಇಂದು ಇವರನ್ನು ಯಶಸ್ವಿ ಜೇನು ಕೃಷಿಕರನ್ನಾಗಿ ಮಾಡಿದ್ದಲ್ಲದೆ ಜಿಲ್ಲೆಯ ಒರ್ವ ಅನುಭವಿ ಜೇನು ತರಬೇತುದಾರರನ್ನಾಗಿಯೂ ರೂಪಿಸಿದೆ.

ತಾಲೂಕಿನ ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟುವಿನ ಕೆ. ಲಕ್ಷ್ಮಣಗೌಡ ಆರೋಗ್ಯ ಇಲಾಖೆಯ ವಾಹನ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಜೇನು ಸಾಕಾಣಿಕೆ ಇವರ ಮೆಚ್ಚಿನ ಹವ್ಯಾಸ. ಸುಳ್ಯ ತಾಲೂಕಿನ ಕೊಳ್ತಿಗೆ ಗ್ರಾಮ ಕರ್ತಡ್ಕ ಇವರ ಹುಟ್ಟೂರಾದರೂ ವೃತ್ತಿಯ ನಿಮಿತ್ತ ಬಂಟ್ವಾಳದಲ್ಲಿ ಇದ್ದಾರೆ. ಆರೋಗ್ಯ ಇಲಾಖೆಯ ವಾಹನ ಚಾಲರಾದರೆ ಇತರ ಚಟುವಟಿಕೆಗಳಿಗೆ ಸಮಯವಕಾಶ ಕಡಿಮೆ. ಕೆಲವೊಮ್ಮೆ ಭಾನುವಾರವೂ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಆದರೂ ಲಭ್ಯವಿರುವ ಸಮಯವನ್ನು ತಾನೂ ಬಾಲ್ಯದಿಂದಲೂ ಪ್ರೀತಿ, ಆಸಕ್ತಿ ಹೊಂದಿದ್ದ ಜೇನು ಸಾಕಾಣಿಕೆಗೆ ಹಾಗೂ ಅದರ ತರಬೇತಿಗಾಗಿ ಮೀಸಲಿಡುತ್ತಾರೆ.

ಪ್ರಸ್ತುತ ಲಕ್ಷ್ಮಣ ಗೌಡ ಅವರಲ್ಲಿ 60 ಜೇನು ಕುಟುಂಬಗಳಿದೆ. ತನ್ನ ಮನೆ ಸುತ್ತಮುತ್ತ, ಗೆಳೆಯರ ತೋಟಗಳಲ್ಲಿ 30 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಹುಟ್ಟೂರಿನಲ್ಲೂ 30 ಪೆಟ್ಟಿಗೆಗಳನ್ನು ಇಟ್ಟು ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಈ ಮೂಲಕ ವರ್ಷಕ್ಕೆ ಸರಾಸರಿ ಒಂದು ಪೆಟ್ಟಿಗೆಯಲ್ಲಿ 10 ರಿಂದ 20 ಕೆ.ಜಿ.ಜೇನು ತುಪ್ಪವನ್ನು ಸಂಗ್ರಹಿಸುತ್ತಾರೆ.

ಕೆ. ಲಕ್ಷ್ಮಣಗೌಡ ಅವರು ತೋಟಗಾರಿಕೆ ಇಲಾಖೆಯ ಜೇನು ಸಾಕಾಣಿಕ ಶಿಬಿರಗಳಲ್ಲಿ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಾರೆ. 2012ರಿಂದ ತರಬೇತಿ ಆರಂಭಿಸಿ ಈವರೆಗೆ ಐವತ್ತಕ್ಕಿಂತಲೂ ಅಧಿಕ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜೇನು ಸಾಕಾಣಿಕೆಯ ತರಬೇತಿ ನೀಡಿದ್ದಾರೆ. ಬಂಟ್ವಾಳ ಸುತ್ತಮುತ್ತ ಜೇನು ಸಾಕಾಣಿಕೆಯ ಕಾರ್ಯಗಾರಗಳು ನಡೆದರೆ ಲಕ್ಷ್ಮಣ ಗೌಡ ಅವರ ಮನೆಯಂಗಳವೇ ಪ್ರಾಯೋಗಿಕ ಪಾಠಶಾಲೆ. ಕರೋನಾ ಸಂದರ್ಭದಲ್ಲೂ ನೂರಾರು ಮಂದಿ ಶಿಬಿರಾರ್ಥಿಗಳಿಗೆ ಮನೆಯಲ್ಲಿಯೇ ಪ್ರಾಯೋಗಿಕ ತರಬೇತಿ ನೀಡಿದ್ದಾರೆ. ಇವರಿಂದ ತರಬೇತಿ ಪಡೆದ ಅನೇಕ ಮಂದಿ ಶಿಬಿರಾರ್ಥಿಗಳು ಜೇನು ಸಾಕಾಣಿಕೆ ಆರಂಭಿಸಿ ಯಶಸ್ಸು ಕಂಡಿದ್ದಾರೆ.

ಜೇನು ಕೃಷಿ ಮಾಡುವ ಪ್ರತಿಯೊಬ್ಬರು ಅಗತ್ಯವಾಗಿ ತರಬೇತಿಯನ್ನು ಪಡೆಯಬೇಕು. ಹೆಚ್ಚು ಆಸಕ್ತಿಯಿಂದ ಹಾಗೂ ಜೇನು ಕುಟುಂಬದ ಬಗ್ಗೆ ಸರಿಯಾದ ಮಾಹಿತಿ ತಿಳಿದು ಕೃಷಿ ಆರಂಭಿಸಿದರೆ ಜೇನು ಕೃಷಿಯಲ್ಲಿ ಪ್ರತಿಯೊಬ್ಬರೂ ಲಾಭ ಪಡೆದುಕೊಳ್ಳಲು ಸಾಧ್ಯ ಎನ್ನುತ್ತಾರೆ ಲಕ್ಷ್ಮಣ ಗೌಡ. ಪ್ರತಿಯೊಂದು ಜೇನು ನೊಣದ ಬಗ್ಗೆಯೂ ಕಾಳಜಿ ವಹಿಸುವ ಇವರು ಪರಿಸರದಲ್ಲಿ ಹಾರಡಿಕೊಂಡಿರುವ ಜೇನುನೊಣಗಳನ್ನು ಮಣ್ಣಿನ ಮಡಿಕೆಗಳಿಗೆ ಆಕರ್ಷಿಸಿ ಮತ್ತೆ ಕುಟುಂಬ ಸಮೇತ ಜೇನು ಪೆಟ್ಟಿಗೆಗೆ ಸ್ಥಳಾಂತರಿಸುವಲ್ಲಿ ಸಿದ್ದಹಸ್ತರು. ಇವರ ಜೇನು ಕೃಷಿಯಲ್ಲಿನ ಸಾಧನೆಯನ್ನು ಗುರುತಿಸಿ ಸೌರಭರತ್ನ ರಾಜ್ಯ ಪ್ರಶಸ್ತಿ ಹರಸಿ ಬಂದಿದೆ.

Related posts

Leave a Reply

Your email address will not be published. Required fields are marked *