
ಬಂಟ್ವಾಳ: ಸಾಕಷ್ಟು ಮಂದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ, ಕೇಂದ್ರದ ನಾಯಕರು, ಮುಖ್ಯಮಂತ್ರಿಯವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ, 13 ತಾರೀಖಿಗೆ ಎನ್ನುವ ಸುದ್ದಿ ಇದೆ. ಎಷ್ಟು ಜನಕ್ಕೆ ಅವಕಾಶ ಸಿಗುತ್ತದೆ ಎನ್ನುವುದು ಅಂದು ತೀರ್ಮಾನ ಆಗಲಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿರಾಜ್ ಅಭಿವೃದ್ದಿ ಖಾತೆಯ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಬಿಜೆಪಿಯ ಜನಸೇವಕ ಸಮಾವೇಶದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕರಾವಳಿಯ ಶಾಸಕರಿಗೆ ಪ್ರಾತಿನಿಧ್ಯ ಸಿಗುತ್ತದೋ ಎನ್ನುವುದು ಪ್ರಶ್ನಾರ್ತಕವಾಗಿಯೇ ಉಳಿದಿದೆ, ಕಾಂಗ್ರೆಸ್, ಜೆಡಿಎಸ್ನ ಶಾಸಕರು ಬಾರದೇ ಇರುತ್ತಿದ್ದರೆ ಬಿಜೆಪಿ ಸರಕಾರ ಬರುತ್ತಿರಲಿಲ್ಲ, ಅವರಿಗೆ ನೀಡಿರುವ ಭರವಸೆಯಂತೆ ಅವರನ್ನು ಮಂತ್ರಿಮಾಡಬೇಕಾಗಿದೆ. ಅವರ ಋಣ ತೀರಿಸಬೇಕಾಗಿದೆ, ಉಳಿದ ಸೀಟ್ಗಳನ್ನು ನಮ್ಮ ಶಾಸಕರಿಗೆ ಹಂಚ ಬೇಕಿದೆ ಎಂದರು. ಪೂರ್ಣ ಬಹುಮತವನ್ನು ರಾಜ್ಯದ ಜನ ನಮಗೆ ನೀಡಿರುತ್ತಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ, ಇರುವ 17 ಸ್ಥಾನಗಳನ್ನು ರಾಜ್ಯದ್ಯಂತ ಹಂಚ ಬೇಕಾಗಿದೆ, ದ.ಕ. ಜಿಲ್ಲೆಯ ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಕೆಂದ್ರದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.