Breaking News

ಸಾಧನೆಗಳಿಂದ ಜೀವನದಲ್ಲಿ ಚಿರಸ್ಮರಣೀಯರು, ಬಂಟ್ಸ್ ಸಾಧಕರಿಗೆ ಸನ್ಮಾನದಲ್ಲಿ ಸದಾನಂದ ಶೆಟ್ಟಿ

 

ಮನುಷ್ಯನ ಹುಟ್ಟು ಸಾವಿನ ಮಧ್ಯೆ ಜೀವನದಲ್ಲಿ ಅವರು ಮಾಡಿರುವ ಸಾಧನೆ, ಗಳಿಸಿರುವ ಪ್ರೀತಿಯೇ ಅವರ ಬದುಕಿನನಂತರ ಸಾರ್ವಜನಿಕ ವಲಯದಲ್ಲಿ ಚಿರಸ್ಮರಣೀಯವಾಗಿ ಉಳಿಯುವಂತೆ ಮಾಡುವುದು ಎಂದು, ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಟ್ರಸ್ಟ್‌ನ ವತಿಯಿಂದ ನಮ್ಮ ಕುಡ್ಲ ಸಭಾಂಗಣದಲ್ಲಿ ನಡೆದ ರಾಜ್ಯ ಅಂತಾರಾಷ್ಟ್ರೀಯ ಮಟ್ಟದ ಸಾಧಕರಿಗೆ ಗೌರವ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬದುಕಿರುವಾಗ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸಲ್ಲಿಸಿದ ಸೇವೆಯನ್ನು ಸಾರ್ವಜನಿಕರು ಮರೆಯುವುದಿಲ್ಲ. ಇಂದಿಗೂ ಅಂತಹ ಸಾಧಕರನ್ನು ಜನತೆ ಪ್ರಾತಃಸ್ಮರಣೀಯವಾಗಿ ಪೂಜಿಸುತ್ತಾರೆ. ಈ ನಿಟ್ಟಿನಲ್ಲಿ ಆರ್ಥಿಕ ಬಲಾಢ್ಯತೆ ಹೊಂದಿರುವ ಕೊಡುಗೈ ದಾನಿಗಳು, ಸಮಾಜ ಸೇವಾ ಸಂಘಸಂಸ್ಥೆಗಳು ಇಂತಹ ಸಾಧಕರನ್ನು ಗುರುತಿಸಿ ಗೌರವಿಸಿ ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ರೋಟರಿ ಸಂಸ್ಥೆಯ ಮಾಜಿ ಗವರ್ನರ್ ಡಾ. ದೇವದಾಸ್ ರೈ ಮಾತನಾಡಿ ಕಡು ಬಡತನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ಮುಂದೆ ಆರ್ಥಿಕವಾಗಿ ಪ್ರೋತ್ಸಾಹ ಸಿಗದೆ ಅದೆಷ್ಟೋ ಪ್ರತಿಭೆಗಳು ಅವಕಾಶವಂಚಿತರಾಗಿ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನಂತಹ ಸಾಮಾಜಿಕ ಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕ ಸರಕಾರದಿಂದ ಇತ್ತೀಚೆಗೆ ಸನ್ಮಾನಗೊಂಡ ಕೃಷ್ಣಕುಮಾರ್ ಪೂಂಜ (ವೈದ್ಯಕೀಯ ಸೇವಾಂಜಲಿ ಪ್ರತಿಷ್ಠಾನ), ಶಿವಪ್ರಸಾದ್ ಆಳ್ವ, ಪುಷ್ಪರಾಜ್ ಅಡ್ಯಂತಾಯ (ಸಾರ್ವಜನಿಕ ಅಭಿಯೋಜಕರು), ಡಾ. ಅಶ್ವಿನಿ ಆಳ್ವ ರಾಷ್ಟ್ರೀಯ ಸೇವಾ ಯೋಜನಡಿಯಲ್ಲಿ ಚೆಂಬುಗುಡ್ಡೆ ಅಂಬೇಡ್ಕರ್‌ನಗರ ದೇರಳಕಟ್ಟೆ ಹಳ್ಳಿಯನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಗೊಳಿಸಿದ ಹಿನ್ನೆಲೆಯಲ್ಲಿ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ವತಿಯಿಂದ ಈ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿದ್ದ ಮಾಜಿ ಸಚಿವ ಅಮರ್‌ನಾಥ್ ಶೆಟ್ಟಿ, ಸವಣೂರು ಸೀತಾರಾಮ ರೈ, ಕೊಡ್ಮಾಣು ರಾಮಚಂದ್ರ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ಜಪ್ಪು ಶಶಿಧರ್‌ಶೆಟ್ಟಿ ಮತ್ತು ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಮಹಿಳಾ ವಿಭಾಗದ ಶ್ರೀಮತಿ ವಿಜಯಲಕ್ಷ್ಮಿ ಬಿ. ಶೆಟ್ಟಿ ಇವರು ಸಾಂದರ್ಭಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಸಂಘಟನಾ ಕಾರ್ಯದರ್ಶಿ ರಾಜ್‌ಗೋಪಾಲ್ ರೈ ಸ್ವಾಗತಿಸಿದರು. ಲಯನ್ ಪ್ರದೀಪ್ ಆಳ್ವ ವಂದಿಸಿದರು.
ಸದಾಶಯ ತ್ರೈಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply