Header Ads
Header Ads
Breaking News

ಸಾರ್ವಜನಿಕ ರುದ್ರಭೂಮಿ ಮತ್ತು ಬಸ್ ತಂಗುದಾಣ,  ತೆಂಕಮಿಜಾರಿನಲ್ಲಿ ಶಾಸಕ ಅಭಯಚಂದ್ರ ಜೈನ್‌ರಿಂದ ಉದ್ಘಾಟನೆ

ತೆಂಕಮಿಜಾರು ಗ್ರಾ. ಪಂ. ವ್ಯಾಪ್ತಿಯ ಬಡಗ ಮಿಜಾರು ಗ್ರಾಮದ ಮರಕಡ ಕರ್ಪು ಪ್ರದೇಶದಲ್ಲಿ ರೂ. ೧೨ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಂಚಾಯತ್‌ನ ಎರಡನೇ ಸಾರ್ವಜನಿಕ ರುದ್ರ ಭೂಮಿ ‘ಮುಕ್ತಿ ಧಾಮ’ವನ್ನು, ತೆಂಕಮಿಜಾರು ಗ್ರಾಮದ ಮಿಜಾರು ಅಣ್ಣಪ್ಪ ನಗರದಲ್ಲಿ ರೂ. ೧೨ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೂರನೇ ರುದ್ರಭೂಮಿ ‘ಶಾಂತಿ ಧಾಮ’ ಹಾಗೂ ಅಶ್ವತ್ಥಪುರ ನೀರ್ಕೆರೆ ನಂದಿನಿ ನಗರದ ಬಳಿ ರೂ. ೧ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬಸ್ಸು ಪ್ರಯಾಣಿಕರ ತಂಗುದಾಣವನ್ನು ಶಾಸಕ ಕೆ. ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು.
ಅನಂತರ ಪಂ. ಕಾರ್ಯಾಲಯದಲ್ಲಿ ಪಂಚಾಯತ್ ವ್ಯಾಪ್ತಿಯ ನಿರುದ್ಯೋಗಿ ಯುವಕ ಯುವತಿಯರಿಗೆ ಮುಖ್ಯಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಉಚಿತ ಆನ್‌ಲೈನ್ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಉತ್ತಮ ಬೆಳವಣಿಗೆ. ಇತರ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ರುದ್ರಭೂಮಿಯನ್ನು ಮಾಡಲು ಕಷ್ಟಸಾಧ್ಯವಾಗಿರುವ ಸಮಯದಲ್ಲಿ ತೆಂಕಮಿಜಾರ್ ಗ್ರಾ. ಪಂ. ವ್ಯಾಪ್ತಿಯಲ್ಲಿ ಒಂದಲ್ಲ ಮೂರು ರುದ್ರಭೂಮಿಗಳನ್ನು ಸುಸಜ್ಜಿತವಾಗಿ ಸ್ಥಾಪಿಸಲಾಗಿರುವುದು ದಾಖಲೆಯಾಗಿದೆ. ನೀರ್ಕೆರೆ ಕುಕ್ಕುದಕಟ್ಟೆ ರಸ್ತೆಯ ಅಭಿವೃದ್ಧಿಗೆ ರೂ. ೪ ಕೋಟಿ ಮಂಜೂರಾಗಿದೆ ಎಂದು ಶಾಸಕ ಕೆ. ಅಭಯಚಂದ್ರ ಪ್ರಕಟಿಸಿದರು. ಮುಂದಿನ ಸಾಲಿನಲ್ಲಿ ನೀರ್ಕೆರೆಯಲ್ಲಿ ಪ.ಪೂ. ಕಾಲೇಜು ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಪಂಚಾಯತ್ ಕಚೇರಿಯೂ ಗಣಕೀಕರಣ ಸಹಿತ ಸರ್ವ ಸೌಕರ್ಯಗಳನ್ನು ಹೊಂದಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಯೋಜನಾಬದ್ಧತೆ, ಕಾರ್ಯತತ್ಪರತೆ, ಅಧ್ಯಕ್ಷರು ಹಾಗೂ ಸದಸ್ಯರ ಸಕ್ರಿಯ ಸಹಕಾರ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ತೆಂಕಮಿಜಾರು ಗ್ರಾ. ಪಂ. ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು. ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖಾ ಉಪನಿರ್ದೇಶಕ ರಾಘವನ್ ಅವರು ಸರಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

Related posts

Leave a Reply