Header Ads
Header Ads
Header Ads
Breaking News

ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಬೆಳ್ಳಿ ಹಬ್ಬದ ಸಮಾರಂಭ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನ.26 ರಂದು ವಿಟ್ಲದ ಶಿವಾಜಿನಗರದಲ್ಲಿ ಆಯೋಜನೆ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಶ ರವಿಪ್ರಕಾಶ್ ಮಾಹಿತಿ

 

ವಿಟ್ಲ: ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ವಿಟ್ಲದ ಶಿವಾಜಿನಗರ ಶಿವಾಜಿ ಮಿತ್ರ ಮಂಡಲ ವತಿಯಿಂದ 25 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಬೆಳ್ಳಿ ಹಬ್ಬ ಸಮಾರಂಭ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಇದೇ 26 ರಂದು ಶಿವಾಜಿನಗರದಲ್ಲಿ ನಡೆಯಲಿದೆ ಎಂದು ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.

ಅವರು ಮಂಗಳವಾರ ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಟ್ಲ ಕಸಬಾ ಗ್ರಾಮದ ಕೂಜಪ್ಪಾಡಿ, ನೆಕ್ಕರೆಕಾಡು ಪರಿಸರದ ನಾಗರೀಕರಿಂದ ಸುಮಾರು 35 ವರ್ಷಗಳ ಹಿಂದೆ ವಿಟ್ಲ ಅರಸರ ಮತ್ತು ದಿ. ಕೂಡೂರು ಕೃಷ್ಣ ಭಟ್ ಅವರ ಸಹಕಾರದಲ್ಲಿ ಕೆ ನಾರಾಯಣ ಶೆಟ್ಟಿಗಾರ, ಶಿವಾಜಿನಗರ ಮತ್ತು ಊರಿನ ಹಿರಿಯರ ಮುತುವರ್ಜಿಯಿಂದ ಶಿವಾಜಿ ಮಿತ್ರ ಮಂಡಲ ಎಂಬ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಸಂಘಟನೆಯ ಕಾರ್ಯಾಲಯದ ಕಟ್ಟಡವನ್ನು ನಿರ್ಮಿಸಲಾಗಿದ್ದು, ಪ್ರತಿ ಆದಿತ್ಯವಾರ ಇಲ್ಲಿ ಭಜನೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.

ಇದೀಗ ಪೂಜಾ ಕಾರ್ಯಕ್ರಮಕ್ಕೆ 25 ರ ಸಂಭ್ರಮ. ಈ ಬೆಳ್ಳಿಹಬ್ಬ ಕಾರ್ಯಕ್ರಮದ ಪ್ರಯುಕ್ತ 26 ರ ಮಧ್ಯಾಹ್ನ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಂಜೆ ಸಾಂಸ್ಕೃತಿಕ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಊರಿನ ಇಬ್ಬರು ಸೈನಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ ಅರವಿಂದ ಬೋಳಾರ್ ಅಭಿನಯದ ತುಳು ಹಾಸ್ಯ ನಾಟಕ “ದೊಂಬೊರಿ ಪಂತೆಗೆ” ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಸಂಜೆ ವಿಟ್ಲದ ಸರ್ಕಾರಿ ಶಾಲೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾರಾಯಣ ಶೆಟ್ಟಿಗಾರ್ ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ರೈ ಎಸ್ಟೆಟ್ ಮಾಲಕ ಅಶೋಕ್ ಕುಮಾರ್ ರೈ, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮ್‌ದಾಸ್ ಶೆಣೈ, ವಿಟ್ಲ ಎಸೈ ನಾಗಾರಾಜ್, ಸುಬ್ರಾಯ ಪೈ, ಸತೀಶ್ ಕುಮಾರ್ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಶಿವಾಜಿ ಮಿತ್ರ ಮಂಡಲದ ಅಧ್ಯಕ್ಷ ಜಯರಾಮ್ ನಾಯ್ಕ, ಬೆಳ್ಳಿಹಬ್ಬ ಸಮಿತಿಯ ಉಪಾಧ್ಯಕ್ಷ ಎನ್.ಕೆ ನಾಯ್ಕ್, ಕೋಶಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.

Related posts

Leave a Reply