Header Ads
Breaking News

ಸಾಲಮನ್ನಾ ಹಣ ಪಾವತಿ ಬಗ್ಗೆ ಅಧಿಕಾರಿಯಿಂದ ಸುಳ್ಳು ಮಾಹಿತಿ : ಸಭೆಗೆ ಬಾರದ ಅಧಿಕಾರಿಗೆ

ಸಾಲಮನ್ನಾ ಫಲಾನುಭವಿಗಳಿಗೆ ನ.30ರೊಳಗೆ ಹಣ ಬಿಡುಗಡೆ ಪಾವತಿ ಆಗುತ್ತದೆ ಎಂದು ಈ ಹಿಂದಿನ ಸಭೆಯಲ್ಲಿ ಸಹಕಾರ ಇಲಾಖೆ ಅಧಿಕಾರಿ ನೀಡಿರುವ ಮಾಹಿತಿ ಸುಳ್ಳಾಗಿದ್ದು, ಆ ಅಧಿಕಾರಿಯ ಬರುವಿಕೆಗಾಗಿ ಕಾದು ಕೊನೆಗೂ ಬಾರದ ಕಾರಣ ಅವರ ವಿರುದ್ಧ ಕಾನೂನು ರೀತಿಯ ಶಿಸ್ತುಕ್ರಮ ಕೈಗೊಳ್ಳುವಂತೆ ನಿರ್ಣಯ ಅಂಗೀಕರಿಸಿದ ವಿದ್ಯಮಾನ ಸುಳ್ಯ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.

ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕರ ಅಧ್ಯಕ್ಷತೆಯಲ್ಲಿ ತಾ.ಪಂ. ಸಾಮಾನ ಸಭೆ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ರಾಧಾಕೃಷ್ಣ ಬೊಳ್ಳೂರು ’‘ಕಳೆದ ಸಭೆಯಲ್ಲಿ ಸಹಕಾರ ಇಲಾಖೆಯ ಪ್ರಭಾರ ಎ.ಆರ್. ಮಂಜುನಾಥ್ ಸಿಂಗ್ ಅವರು ಸಭೆಗೆ ಬಂದು ಸಾಲಮನ್ನಾದ ತಪ್ಪು ಮಾಹಿತಿ ನೀಡಿದ್ದಾರೆ. ನ.30ರೊಳಗೆ ಸಾಲಮನ್ನಾ ಹಣ ಜಮೆ ಆಗುತ್ತದೆ ಎಂದು ಹೇಳಿದ್ದರೂ ಈ ತನಕ ಬಂದಿಲ್ಲ. ಅವರು ಸದನದ ದಿಕ್ಕು ತಪ್ಪಿಸಿರುವ ಅಧಿಕಾರಿ. ಈ ಸಭೆಗೆ ತತ್‌ಕ್ಷಣ ಬರುವಂತೆ ಆಗ್ರಹಿಸಿದರಲ್ಲದೆ, ಕಳೆದ ಸಭೆಯಲ್ಲಿ ಅಧಿಕಾರಿ ಆಡಿರುವ ಮಾತಿನ ವಿವರ ಸಭೆಗೆ ನೀಡಿದರು.
ಅವರಿಗೆ ವಿಪಕ್ಷ ನಾಯಕ ಅಶೋಕ್ ನೆಕ್ರಾಜೆ, ಅಬ್ದುಲ್ ಗಫೂರ್ ಧ್ವನಿಗೂಡಿಸಿ, “ಉಳಿತಾಯ ಖಾತೆ ಸರಿಪಡಿಸಿದ ಫಲಾನುಭವಿಗಳಿಗೂ ಹಣ ಬಂದಿಲ್ಲ. ಅಧಿಕಾರಿ ಈ ಸಭೆಗೆ ಬರಲಿ” ಎಂದರು. ಬಳಿಕ ತಾ.ಪಂ. ಅಧ್ಯಕ್ಷರು ಎ.ಆರ್.ಗೆ ಫೋನ್ ಮಾಡಿ ಸಭೆಗೆ ಬರುವಂತೆ ಹೇಳಿದರು. ಅಧಿಕಾರಿಯೊಂದಿಗೆ ಮಾತನಾಡಿದ ಮಾಹಿತಿಯನ್ನು ಅಧ್ಯಕ್ಷರು ಸಭೆಗೆ ನೀಡಿ, ಸಿಡಿಒ ರನ್ನು ಕಳುಹಿಸಿ ಕೊಡುವುದಾಗಿ ಹೇಳಿದ್ದಾರೆ ಎಂದು ಹೇಳಿದರಲ್ಲದೆ ಈಗ ಚುನಾವಣೆ ಕರ್ತವ್ಯದಲ್ಲಿದ್ದಾರೆಂದು ಹೇಳಿದ್ದಾರೆ. ಬಳಿಕ ಬರುತ್ತಾರಂತೆ ಅಧಿಕಾರಿ ಬಂದ ಬಳಿಕ ಈ ವಿಷಯ ಮಾತನಾಡೋಣ” ಎಂದು ಹೇಳಿದರು. ಆಗ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿಯವರು ಸಭೆ ನಡೆಯುವಾಗ ಅವರ ಅಗತ್ಯತೆ ಇದೆ ಎಂದಾಗ ಅವರು ಚುನಾವಣೆ ಮತ್ತೊಂದು ನೆಪ ಒಡ್ಡಬಾರದು ಸಭೆಗೆ ಬರಬೇಕು” ಎಂದು ಹೇಳಿದರು.
ಮಧ್ಯಾಹ್ನ ಬಳಿಕ ಸಭೆ ಮುಂದುವರಿದು 4 ಗಂಟೆಯಾದರೂ ಸಾಲಮನ್ನಾಕ್ಕೆ ಉತ್ತರಿಸಲು ಸಹಕಾರ ಇಲಾಖೆಯ ಅಧಿಕಾರಿ ಬರಲಿಲ್ಲ. ಬಳಿಕ ರಾಧಾಕೃಷ್ಣ ಬೊಳ್ಳೂರುರವರು ”ಅಧ್ಯಕ್ಷರು ಫೋನ್ ಮಾಡಿ ಬರುವಂತೆ ಹೇಳಿದಾಗ, ಬರುತ್ತೇವೆಂದು ಹೇಳಿ ಸಭೆ ಮುಗಿಯುವ ಹಂತವಾದರೂ ಬರಲಿಲ್ಲ. ಇದು ಸದನಕ್ಕೆ ಮಾಡಿದ ಅವಮಾನ. ಇದನ್ನು ಹೀಗೆ ಬಿಡಬಾರದು. ಸಾಲ ಮನ್ನಾ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ ಸಹಕಾರಿ ಇಲಾಖೆಯ ಡಿ.ಆರ್., ಎ.ಆರ್. ರ ವಿರುದ್ಧ ಶಿಸ್ತು ಕ್ರಮಕ್ಕೆ ಬರೆಯಬೇಕು. ಮತ್ತು ಅಧಿಕಾರಿ ಸಭೆಗೆ ಬಾರದೆ ಅವಮಾನ ಮಾಡಿದ್ದರ ಕುರಿತು ನಿರ್ಣಯ ಮಾಡಿ. ಹಾಗೂ ಸಾಲಮನ್ನಾ ಹಣ ಶೀಘ್ರವಾಗಿ ಬಿಡುಗಡೆ ಮಾಡಲು ಸರಕಾರಕ್ಕೆ ಒತ್ತಾಯಿಸಲು ನಿರ್ಣಯ ಮಾಡೋಣ” ಎಂದು ಹೇಳಿದರು. ಅವರ ಮಾತಿನಂತೆ ನಿರ್ಣಯ ಮಾಡಲು ಸಭೆ ಒಪ್ಪಿಗೆ ಸೂಚಿಸಿತು.
ಎಣ್ಮೂರು ಗ್ರಾ.ಪಂ. ಅನ್ನು ಸಮೀಪದ ಗ್ರಾ.ಪಂ.ಗೆ ವಿಲೀನಗೊಳಿಸುವುದಕ್ಕೆ ಗ್ರಾಮ ಸಭೆಯಲ್ಲಿ ಆಕ್ಷೇಪ ವ್ಯಕ್ತ ಪಡಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಗ್ರಾ.ಪಂ. ಚುನಾವಣೆ ಸನಿಹದಲ್ಲಿದೆ. ನೋಟಿಫಿಕೇಶನ್ ಆದ ಅನಂತರ ಕೋರ್ಟ್ ಮೆಟ್ಟಿಲೇರಿದರೂ ಪ್ರಯೋಜನವಾಗದು. ಅದಕ್ಕೆ ಮೊದಲೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ ಒತ್ತಾಯಿಸಿದರು.
ಈ ಸಂದರ್ಭ ಉಪಾಧ್ಯಕ್ಷೆ ಶುಭದಾ ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಇ.ಒ. ಭವಾನಿಶಂಕರ, ಜಿ.ಪಂ. ಸದಸ್ಯರುಗಳಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಆಶಾ ತಿಮ್ಮಪ್ಪ, ಪುಷ್ಪಾವತಿ ಬಾಳಿಲ, ತಾ.ಪಂ. ಸದಸ್ಯರಾದ ರಾಧಾಕೃಷ್ಣ ಬೊಳ್ಳೂರು, ಉದಯಕೊಪ್ಪಡ್ಕ, ಅಶೋಕ್ ನೆಕ್ರಾಜೆ, ಅಬ್ದುಲ್ ಗಫೂರ್ ಕಲ್ಮಡ್ಕ, ಇಲಾಖಾಧಿಕಾರಿಗಳು ಹಾಜರಿದ್ದರು.

Related posts

Leave a Reply

Your email address will not be published. Required fields are marked *