Header Ads
Header Ads
Breaking News

ಸಾಲ ಪಾವತಿಸಲು ಅಡಿಕೆ ಬೆಳೆಗಾರರಿಗೆ “ಲೀಗಲ್” ನೊಟೀಸ್:ಅ.1ರಂದು ಪ್ರತಿಭಟನೆ

ವಿಟ್ಲ: ಕರ್ನಾಟಕ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಾಗೂ ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಮಾಡಿ ರೈತರನ್ನು ಋಣಮುಕ್ತರನ್ನಾಗಿಸುವ ಪ್ರಯತ್ನದಲ್ಲಿರುವಾಗ, ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಪಾವತಿಸಲು ಅಡಿಕೆ ಬೆಳೆಗಾರರಿಗೆ ಲೀಗಲ್ ನೋಟೀಸ್ ಕಳುಹಿಸಲಾಗುತ್ತಿದೆ. ಇದನ್ನು ಖಂಡಿಸಿ, ಅ.1ರಂದು ಸವಣೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿಗೆ ಬೀಗ ಜಡಿದು, ಪ್ರತಿಭಟನೆ ಮಾಡಲಿದ್ದೇವೆ ಎಂದು ಹಸಿರುಸೇನೆಯ ದ.ಕ.ಜಿಲ್ಲೆಯ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಬಲುಗುತ್ತು ಅವರು ತಿಳಿಸಿದರು.ಅವರು ಶುಕ್ರವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಯವರು ಸಾಲ ಮನ್ನಾ ಮಾಡುವ ಸ್ಪಷ್ಟ ಸೂಚನೆ ನೀಡಿರುವಾಗಲೇ ಜಿಲ್ಲೆಯ ಬ್ಯಾಂಕ್‌ಗಳ ಹಠಮಾರಿ ಧೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಅಲ್ಲದೇ ರೈತರ ಸಾಲ ವಸೂಲಾತಿಗೆ ಕೋರ್ಟ್ ಮೆಟ್ಟಿಲೇರುವ ಹುನ್ನಾರವನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲೆಯ ಸಂಘಟನ ಕಾರ್ಯದರ್ಶಿ ಮನೋಹರ ಶೆಟ್ಟಿ ಎನ್.ನಡಿಕಂಬಳಗುತ್ತು ಅವರು ಮಾತನಾಡಿ, ಜಿಲ್ಲೆಯಾದ್ಯಂತ ಅಡಿಕೆ ಬೆಳೆಗಾರರಿಗೆ ವಕೀಲರಿಂದ ನೋಟೀಸ್ ಕಳುಹಿಸಿ, ರೈತರನ್ನು ಬೆದರಿಸುವ ಕಾರ್ಯ ಆರಂಭಿಸಿರುವ ಬ್ಯಾಂಕ್‌ಗಳ ವಿರುದ್ಧ ಎಚ್ಚರಿಕೆ ನೀಡಬೇಕಾಗಿದೆ. ಈ ಪ್ರತಿಭಟನೆಯೂ ಆರಂಭ ಅಷ್ಟೇ. ಎಚ್ಚರಿಕೆ ನೀಡುವ ಉದ್ದೇಶವೂ ಹೌದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಸಂಘಟನ ಕಾರ್ಯದರ್ಶಿ ಮನೋಹರ ಶೆಟ್ಟಿ, ಗೌರವ ಸಲಹೆಗಾರ ಮುರುವ ನಡುಮನೆ ಮಹಾಬಲ ಭಟ್, ಬಂಟ್ವಾಳ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್.ಕೆ.ಇದಿನಬ್ಬ, ವಿಟ್ಲ ಕಾರ್ಯದರ್ಶಿ ಸುದೇಶ್ ಎಸ್.ಭಂಡಾರಿ, ಸುದೇಶ್ ಮಯ್ಯ ಪಾಣೆಮಂಗಳೂರು, ರಾಘವ ಪೂಜಾರಿ, ಆನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply