Header Ads
Header Ads
Breaking News

ಸಿಂಪಲ್ ವ್ಯಕ್ತಿ ನಿರ್ಮಾಣದ ಸಿಂಪಲ್ ಸ್ಟೋರಿಗೆ ರಾಷ್ಟ್ರ ಪ್ರಶಸ್ತಿಯ ಗರಿ

ಓದಿದ್ದು ಆರನೇ ಕ್ಲಾಸ್, ಸದ್ಯ ಮಾಡ್ತಾ ಇರೋದು ಬಟ್ಟೆ ವ್ಯಾಪಾರ. ಆದ್ರೆ ಗಳಿಸಿರೋದು ರಾಷ್ಟ್ರ ಪ್ರಶಸ್ತಿ. ಹೌದು ಗುಲ್ವಾಡಿ ಪ್ರತಿಬೆ ಯಾಕೂಬ್ ಖಾದರ್ ಗುಲ್ವಾಡಿ ಕುಂದಾಪುರದವರಿಗೆ ಪರಿಚಿತ ಹೆಸರು. ಅವರ ಗುಲ್ವಾಡಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ರಿಸರ್ವೇಶನ್ ಚಿತ್ರ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂದು ರಾಷ್ಟ್ರಪಶಸ್ತಿಗಳಿಸಿರುವುದು ಕುಂದಾಪುರದವರಿಗೆ ಹೆಮ್ಮೆಯ ವಿಚಾರವಾಗಿದೆ.
ನೋಡೋದಕ್ಕೆ ಸಿಂಪಲ್ ವ್ಯಕ್ತಿ, ಅಹಂಕಾರವಿಲ್ಲದ ಸ್ನೇಹ ಜೀವಿ, ಖ್ಯಾತ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರ ಗರಡಿಯಲ್ಲಿ ಪಳಗಿದ ಇವರ ಹೆಸರು ಯಾಕೂಬ್ ಖಾದರ್ ಗುಲ್ವಾಡಿ. ಓದಿದ್ದು ಆರನೇ ಕ್ಲಾಸ್ ಆದ್ರೂ ಮಾಡೋ ಕೆಲಸ ಮಾತ್ರ ಡಬಲ್ ಡಿಗ್ರಿಯಾದವರನ್ನೂ ನಾಚಿಸುತ್ತದೆ. ಕಲಾತ್ಮಕ ಚಿತ್ರಗಳಿಗೆ ಸಂಭಾಷಣಾಕಾರರಾಗಿ, ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ್ದ ಯಾಕೂಬ್, ಬ್ಯಾರಿ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಚಿಕ್ಕವರಿದ್ದಾಗ ಗುಜರಿ ಹೆಕ್ಕುವ ಕೆಲಸ ಮಾಡಿಕೊಂಡು ಬಂದಿದ್ದ ಇವರು ಅದೇ ಇವರ ಜೀವನೋಪಾಯವಾಯಿತು. ಬ್ಯಾರಿ ಭಾಷೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರಿಂದ ಮೊದಲು ಗುಲಾಬಿ ಟಾಕೀಸ್ ಚಿತ್ರಕ್ಕೆ ವಸ್ತ್ರ ವಿನ್ಯಾಸಕರಾಗಿ ಮತ್ತು ಸಂಭಾಷಣೆಯನ್ನು ಕುಂದಗನ್ನಡ ಮತ್ತು ಬ್ಯಾರಿ ಭಾಷೆಗೆ ರೂಪಾಂತರಿಸುವ ಜವಬ್ದಾರಿ ದೊರಕಿತು. ಆ ಬಳಿಕ ಹಿಂದು ಮುಂದು ನೋಡದ ಅವರು ಹಜ್, ಗೆರೆಗಳು, ಇಷ್ಟಕಾಮ್ಯ ಹೀಗೆ ಹಲವಾರು ಚಿತ್ರಗಳಲ್ಲಿ ಕೆಲಸ ಸಂಭಾಷಣಾಕಾರರಾಗಿ ತಂತ್ರಜ್ಞಾರಾಗಿ ಮತ್ತು ನಟನೆಯನ್ನೂ ಕೂಡ ಮಾಡಿದ್ದಾರೆ.
ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಣದ ರಿರ್ಸವೇಶನ್ ಚಿತ್ರ ಎನ್ನೋದು ಪ್ರಮುಖವಾಗಿ ಬ್ರಾಹ್ಮಣ ಕುಟುಂಬವೊಂದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ಸಿಗುವ ಮೀಸಲಾತಿಗೋಸ್ಕರ ನಡೆಸುವ ತಪ್ಪು ಮತ್ತು ಅದರ ಸುತ್ತ ನಡೆಯುವ ತಳಮಳ, ಕೌಟುಂಬಿಕ ಕಲಹ ಇವುಗಳನ್ನು ಬೆಳ್ಳಿತೆರೆಯ ಮೇಲೆ ತರುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದಾರೆ. ಪ್ರತಿಯೋಬ್ಬರೂ ನೋಡಲೇ ಬೇಕಾದ ಈ ಚಿತ್ರದ ಸಂಪೂರ್ಣ ಚಿತ್ರೀಕರಣಗೊಂಡಿರುವುದು ಕುಂದಾಪುರ ತಾಲೂಕಿನಲ್ಲೇ ಎನ್ನುವುದು ವಿಶೇಷ.
ಮೇ.3ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರಿಂದ ಪ್ರಶಸ್ತಿಯನ್ನು ಚಿತ್ರದ ನಿರ್ದೇಶಕ ನಿಖಿಲ್ ಮಂಜು ಸ್ವೀಕರಿಸಿದ್ದಾರೆ. ಈಗ ಅಂತರಾಷ್ಟ್ರೀಯ ಚಲನಚಿತ್ರ ಸ್ಪರ್ಧೇಯಲ್ಲಿ ಕೂಡ ಭಾಗವಹಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಸಿದ್ದತೆಗಳು ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಕುಂದಾಪುರದಲ್ಲಿ ಚಿತ್ರದ ಪ್ರೀಮೀಯರ್ ಶೋ ಕೂಡ ನಡೆಯಲಿದೆ. ಈ ಕುರಿತು ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಗುಲ್ವಾಡಿಯವರು ಹೇಳಿದ್ದಾರೆ.
ಪ್ರಾದೇಶಿಕ ಭಾಷಾ ಚಿತ್ರವೊಂದು ಅದರಲ್ಲೂ ಕುಂದಾಪ್ರ ಕನ್ನಡದ ಚಿತ್ರವೊಂದು ರಾಷ್ಟ್ರಪ್ರಶಸ್ತಿಯನ್ನು ಗೆದ್ದು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುವತ್ತ ದಾಪುಗಾಲಿಡುತ್ತಿದೆ. ಕೇವಲ ೨೦ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಚಿತ್ರದ ಬಗ್ಗೆ ಚಿತ್ರಾಭಿಮಾನಿಗಳಲ್ಲಿ ಬಹಳಷ್ಟು ಕುತೂಹಲ ಕೂಡ ಮೂಡಿದೆ.
ಯಾಕೂಬ್ ಖಾನ್ ಗುಲ್ವಾಡಿಯವರ ಈ ಪ್ರಯತ್ನದಿಂದ ಕುಂದಾಪ್ರ ಕನ್ನಡದ ಉಳಿವಿಗೆ ಒಂದು ವಿಶೇಷ ಪ್ರಯತ್ನ ಕೂಡ ಹೌದು ಎಂದರೆ ತಪ್ಪಾಗಲಾರದು. ಈಗಾಗಲೇ ರಿಸರ್ವೇಶನ್ ಯಶಸ್ಸಿನಿಂದ ಸಂತಸಗೊಂಡಿರುವ ಯಾಕೂಬ್ ಖಾದರ್ ಉತ್ತಮ ಕಥೆ ಸಿಕ್ಕರೆ ಮತ್ತೊಂದು ಉತ್ತಮ ಚಿತ್ರ ನಿರ್ಮಿಸುವ ಇರಾದೆ ಇದೆ ಇಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಸಾಧಿಸುವ ಛಲವಿದ್ದರೆ ಉನ್ನತ ವ್ಯಾಸಂಗ ಬೇಕಾಗಿಲ್ಲ. ಕಡಿಮೇ ವಿದ್ಯಾಭ್ಯಾಸವಿದ್ದರೂ ಸಾಧಿಸಬಹುದೆಂದು ಯಾಕೂಬ್ ಖಾದರ್ ತೋರಿಸಿಕೊಟ್ಟಿದ್ದಾರೆ.

 

Related posts

Leave a Reply