Header Ads
Header Ads
Breaking News

ಸಿಗಡಿ ಕೃಷಿಯಿಂದಾಗಿ ಕೃಷಿಭೂಮಿಗೆ ಉಪ್ಪು ನೀರು : ವಿ4 ವಾಹಿನಿಯಲ್ಲಿ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿ

ಕುಂದಾಪುರ: ಸಿಗಡಿ ಕೃಷಿಯಿಂದಾಗಿ ಹರೆಗೋಡು ಕೃಷಿಭೂಮಿಗೆ ಉಪ್ಪು ನೀರು ನುಗ್ಗುತ್ತಿರುವ ಬಗ್ಗೆ ವಿ4 ವಾಹಿನಿ ವಿಶೇಷ ಪ್ರಕಟಿಸಿದ ಬೆನ್ನಲ್ಲೇ ಸ್ಥಳಕ್ಕೆ ಕುಂದಾಪುರ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಭೇಟಿ ನೀಡಿ ರೈತರ ಸಂಕಷ್ಟಗಳನ್ನು ಆಲಿಸಿದರು.

ಮಂಗಳವಾರ ಮಧ್ಯಾಹ್ನ ಹರೆಗೋಡುವಿಗೆ ಭೇಟಿ ನೀಡಿದ ಅವರು ಕೃಷಿಗದ್ದೆ ಹಾಗೂ ಸಿಗಡಿ ಕೆರೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ಕೃಷಿಕರು ಅವೈಜ್ಙಾನಿಕ ಸಿಗಡಿ ಕೃಷಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಿಗಡಿ ಕೃಷಿ ನಮ್ಮ ಜೀವನದ ದಾರಿಯನ್ನೇ ಕಿತ್ತುಕೊಂಡಿದೆ. ಸಮೃದ್ಧ ಕೃಷಿ ಭೂಮಿ ಬರಡಾಗಿದ್ದು, ಕುಡಿಯುವ ನೀರು ಕೂಡ ಉಪ್ಪಾಗಿದೆ. ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ. ಸಿಗಡಿ ಕೃಷಿ ಧಾಂಗುಡಿಗೆ ಮುಕ್ತಿ ಕೊಡಿಸಿ ಎಂದು ಕೃಷಿಕರು ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿಕೊಂಡರು.

ಕಟ್‍ಬೇಲ್ತೂರು ಗ್ರಾಮ ಹರೆಗೋಡು ಪರಿಪರಿಸರದಲ್ಲಿ ಸಿಗಡಿ ಕೃಷಿಗೂ ಮುನ್ನಾ ಭತ್ತ, ಧವಸ ಧಾನ್ಯಗಳನ್ನು ಬೆಳೆಸುತ್ತಾ ಬದುಕು ಕಟ್ಟಿಕೊಂಡಿದ್ದೆವು. ಈ ಭಾಗದಲ್ಲಿ ಯಾವತ್ತು ಸಿಗಡಿ ಕೃಷಿ ಆರಂಭವಾಯಿತೋ ಅಂದಿನಿಂದ ಇಂದಿನವರಗೆ ಹಂತಹಂತವಾಗಿ ನಮ್ಮ ಭತ್ತದ ಭೂಮಿ ಬರಡಾಗುತ್ತಾ ಬರುತ್ತಿದೆ. ಪ್ರಸಕ್ತ ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗದೆ ನೂರಾರು ಎಕ್ರೆ ಭೂಮಿ ಹಡಿಲು ಬಿಡ ಬೇಕಾಗಿದೆ. ಇನ್ನು ಕಷ್ಟಪಟ್ಟು ನಾಟಿ ಮಾಡಿದ ಗದ್ದೆಯಲ್ಲಿ ಭತ್ತದ ನೇಜಿ ಕರಕಲಾಗುತ್ತಿದೆ. ಕೃಷಿಯೇ ಇಲ್ಲದ ಮೇಲೆ ನಾವು ಬದುಕುವುದಾರೂ ಹೇಗೆ ಎಂದು ಅಧಿಕಾರಿಗಳ ಮುಂದೆ ಕೃಷಿಕರು ತಮ್ಮ ಅಸಹಾಯಕತೆ ತೋಡಿಕೊಂಡರು.

ಸಿಗಡಿ ಕೃಷಿ ಹಿನ್ನೆಲೆಯಲ್ಲಿ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ಹಾಳುಗೆಡವಲಾಗಿದೆ. ನಾವು ನಮ್ಮ ಸಮಸ್ಯೆ ಸಿಗಡಿ ಕೃಷಿಕರ ಗಮನಕ್ಕೆ ತಂದರೆ ಉಡಾಫೆ ಮಾತನಾಡುವ ಜೊತೆಗೆ ನಮಗೇ ಧಮ್ಕಿ ಹಾಕುತ್ತಾರೆ. ಸ್ಥಳಕ್ಕೆ ಎಸಿ, ಕಂದಾಯ ಇಲಾಖೆ, ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಬರುತ್ತಾರೆ ಸ್ಥಳದಲ್ಲಿ ಹಾಜರಿರುವಂತೆ ಸೂಚಿಸಿದರೂ ಸಿಗಡಿ ಕೃಷಿಕರು ಸ್ಥಳದಲ್ಲಿರದೆ ಇರುವುದು ಅವರ ಉದ್ದಟತನಕ್ಕೆ ಸಾಕ್ಷಿ. ಉಪ್ಪುನೀರು ನುಗ್ಗದಂತೆ ಕಿಂಡಿ ಆಣೆಕಟ್ಟು ಮಾಡಿದರೆ ಸಮಸ್ಯೆಗೊಂದು ಪರಿಹಾರ ಸಿಗುತ್ತದೆ ಎಂಬ ಸಲಹೆಯನ್ನು ಸ್ಥಳೀಯರು ನೀಡಿದರು.
ಈ ವೇಳೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್, ಸಿಗಡಿ ಕೃಷಿ ನಿಯಮ ಪಾಲನೆ ಮಾಡುತ್ತಿಲ್ಲ ಎನ್ನೋದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಉಪ್ಪು ನೀರು ನುಗ್ಗುವುದೇ ಕೃಷಿ ಭೂಮಿ ನಾಶವಾಗಲು ಕಾರಣವಾಗಿದೆ. ಸಿಗಡಿ ಕೃಷಿ ನವೀಕರಣ ಸಂದರ್ಭದಲ್ಲಿ ಸಿಗಡಿ ಕೃಷಿ ಸಮಸ್ಯೆ ನಿಯಮ ಉಲ್ಲಂಘನೆ ಬಗ್ಗೆ ಡಿಸಿ ಗಮನಕ್ಕೆ ತರುತ್ತೇನೆ. ನಿಯಮಾನುಸಾರ ಯಾರು ಸಿಗಡಿ ಕೃಷಿ ಮಾಡುವುದಿಲ್ಲವೋ ಅಂತವರ ಪರಿವಾನಿಗೆ ನವೀಕರಿಸುವುದಿಲ್ಲ ಎಂದರು.

ಈ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಪುತ್ರನ್, ಕಟ್‍ಬೇಲ್ತೂರು ಗ್ರಾಪಂ ಸದಸ್ಯರಾದ ಶೇಖರ ಬೆಳೆಗಾರ, ಚಂದ್ರಶೇಖರ ಭಟ್, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪುರುಷೋತ್ತಮ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪ ಜೆ., ಕಟ್‍ಬೇಲ್ತೂರು ಪಿಡಿಒ ಅಶ್ವಿನಿ, ವಿಎ ಸೋಮಯ್ಯ, ಊರಿನ ಪ್ರಮುಖರಾದ ವಿಸ್ವನಾಥ ಗಾಣಿಗ, ಶ್ರೀನಿವಾಸ ಗಾಣಿಗ ಮುಂತಾದವರು ಇದ್ದರು.
ಕೃಷಿಗದ್ದೆಗಳಿಗೆ ಉಪ್ಪು ನೀರು ನುಗ್ಗುವುದರಿಂದ ನೂರಾರು ಎಕರೆ ಕೃಷಿಗದ್ದೆಗಳನ್ನು ಇಲ್ಲಿನ ಕೃಷಿಕರು ಕೃಷಿ ಮಾಡಲಾಗದೆ ಹಡಿಲು ಬಿಟ್ಟಿದ್ದರು. ಆದರೆ ಈ ಭಾಗದ ಕೃಷಿಕ ವಿಶ್ವನಾಥ ಗಾಣಿಗ ಲೋಟ ಕೃಷಿ ಎನ್ನುವ ಹೊಸ ಪ್ರಯೋಗವನ್ನು ಮಾಡಿ ವಿ4 ವಾಹಿನಿಯ ಗಮನ ಸೆಳೆದಿದ್ದರು. ವಿಶ್ವನಾಥ ಗಾಣಿಗರ ಲೋಟ ಕೃಷಿಯ ಬಗ್ಗೆ ವಿ4 ವಾಹಿನಿ  ವರದಿ ಪ್ರಕಟಿಸಿ ಗದ್ದೆಗಳಿಗೆ ನುಗ್ಗುತ್ತಿರುವ ಉಪ್ಪು ನೀರಿನ ತಡೆಗೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಇದೀಗ ಎಸಿ ಭೇಟಿಯ ನಂತರ ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೊಟ್ಟ ಭರವಸೆಗಳು ಯಥಾವತ್ತಾಗಿ ನಡೆದರೆ ಈ ಭಾಗದ ಗದ್ದೆಗಳಲ್ಲಿ ಮತ್ತೆ ಹಸಿರನ್ನು ಕಾಣಬಹುದು. ಇದು ಆದಷ್ಟು ಬೇಗ ಸಮೀಪಿಸಲಿ ಎನ್ನುವುದೆ ನಮ್ಮ ಆಶಯ.

Related posts

Leave a Reply

Your email address will not be published. Required fields are marked *