Breaking News

ಸಿದ್ದರಾಮಯ್ಯರದು ಜನರಿಂದ ಜನರಿಗಾಗಿ ಸರಕಾರ, ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಜನಮಾನಸ ಸಭೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿರಿಸಿಕೊಂಡು ಆಡಳಿತ ನಡೆಸುತ್ತಿದ್ದು, ಅನ್ನಭಾಗ್ಯದಂತಹ ಯೋಜನೆಯ ಮೂಲಕ ಹಸಿವು ಮುಕ್ತ ರಾಜ್ಯ ನಿರ್ಮಾಣ ಮಾಡುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು. ಟಿ. ಖಾದರ್ ಹೇಳಿದರು.
ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಮತ್ತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಬಡವರ ಪರವಾಗಿದ್ದು, ಅಧಿಕಾರಶಾಹಿಗಳಿಗೆ ಮಣೆ ಹಾಕಿಲ್ಲ. ಉಚಿತ ಕ್ಷೀರ ಭಾಗ್ಯ, ಅನ್ನಭಾಗ್ಯ, ಹೈನುಗಾರಿಕೆಗೆ ಸಬ್ಸಿಡಿ, ಭಾಗ್ಯಲಕ್ಷ್ಮಿ ಯೋಜನೆ ಕಾರ್ಯಕ್ರಮಗಳ ಮೂಲಕ ಚುನಾವಣಾ ಸಂದರ್ಭ ನೀಡಿದ ಆಶ್ವಾಸನೆಯಂತೆ ನಡೆದಿದೆ. ಜಾತಿ ಸಮೀಕ್ಷೆಯ ಹಿಂದೆ ಸಾಮಾಜಿಕ ಬದ್ಧತೆ ಇದ್ದು, ಮೂಲನಂಬಿಕೆಯನ್ನು ಉಳಿಸಿ ಅಂಧಶ್ರದ್ಧೆಯ ಮೂಢನಂಬಿಕೆಯನ್ನು ತೊಲಗಿಸುವ ಸರ್ವತೋಮುಖ ಅಭಿವೃದ್ಧಿಯೇ ಸರ್ಕಾರದ ಮೂಲ ಉದ್ಧೇಶವಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿದ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಶೇ. ೯೫ ಭಾಗದಷ್ಟು ಈಡೇರಿಸಿದ್ದು, ಉಳಿದ ೫ ಭಾಗವನ್ನು ೧೧ ತಿಂಗಳ ಅವಧಿಯಲ್ಲಿ ಈಡೇರಿಸಿ ನುಡಿದಂತೆ ನಡೆದ ಸರ್ಕಾರ ಎನಿಸಿಕೊಳ್ಳಲಿದೆ. ತಾಲ್ಲೂಕಿಗೆ ೪ ವರ್ಷಗಳ ಅವಧಿಯಲ್ಲಿ ರೂ. ೬೭೯.೨೫ ಕೋಟಿ ಅನುದಾನ ತಂದಿದ್ದು, ದೊಡ್ಡ ತಾಲ್ಲೂಕಾದರೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಹಳ್ಳಿಗಳಿಗೆ ರಸ್ತೆ ಡಾಂಬರೀಕರಣ, ನೀರಿನ ವ್ಯವಸ್ಥೆ, ವಿದ್ಯುದೀಕರಣ, ಆಸ್ಪತ್ರೆ, ಗೋ ಆಸ್ಪತ್ರೆಯ ಸೌಲಭ್ಯವನ್ನು ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಶಾಹುಲ್ ಹಮೀದ್, ಇ. ಸುಂದರ ಗೌಡ, ಲೋಕೇಶ್ವರಿ ವಿನಯಚಂದ್ರ ಮಾತನಾಡಿದರು. ಇದೇ ಸಂದರ್ಭದಲ್ಲಿ ತನ್ನೀರುಪಂತ ಗ್ರಾಮದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಯುವಕರಿಗೆ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

Related posts

Leave a Reply