Header Ads
Breaking News

ಸಿದ್ದಾಪುರದಲ್ಲಿ ಸಹಕಾರಿ ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡ ಉದ್ಘಾಟನೆ

ಕುಂದಾಪುರ: ಅಂದು ಕೇವಲ ಕುರ್ಚಿ, ಟೇಬಲ್ ಇಟ್ಟು ಜನರ ಸೇವೆಗೆ ಮುಂದಾಗಿದ್ದ ನಾವು ಇಂದು ಎರಡು ಕೋಟಿ ವೆಚ್ಚದಲ್ಲಿ ಸಂಪೂರ್ಣ ಹವಾನಿಯಂತ್ರಿತ ಕಟ್ಟಡವನ್ನು ನಿರ್ಮಿಸಿ ಹೊಸ ತಂತ್ರಜ್ಙಾನದೊಂದಿಗೆ ಸೇವೆ ನೀಡಲು ಸಜ್ಜಾಗಿದ್ದೇವೆ. ಸಹಕಾರಿ ಕ್ಷೇತ್ರದಲ್ಲಿ ಇದೀಗ ಬದಲಾವಣೆ ಗಾಳಿ ಬೀಸುತ್ತಿದ್ದು, ನಾವು ಬಲಿಷ್ಠರಾಗುತ್ತಿದ್ದೇವೆ. ಜನರು ನಮ್ಮ ಮೇಲಿಟ್ಟ ವಿಶ್ವಾಸಕ್ಕೆ ಈ ಎಲ್ಲಾ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಮ್. ಎನ್ ರಾಜೇಂದ್ರ ಕುಮಾರ್ ಹೇಳಿದರು. 

ಅವರು ಬುಧವಾರ ಸಿದ್ದಾಪುರದಲ್ಲಿ 2ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಪೂರ್ಣ ಹವಾನಿಯಂತ್ರಿತ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡ ಕದಿರು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ರೈತರು ಬ್ಯಾಂಕಿನೊಳಗೆ ಬಂದಾಗ ಅವರ ಮನಸ್ಸು, ಹೃದಯ ತಂಪಾಗಬೇಕು ಹಾಗೂ ಹವಾನಿಯಂತ್ರಿತ ವ್ಯವಸ್ಥೆ ಪೇಟೆ ಭಾಗಗಳಿಗೆ ಸೀಮಿತವಾಗಿರದೆ ಹಳ್ಳಿಯಜನರಿಗೂ ತಾಪಮಾನದ ಬಿಸಿತಾಗದಿರಲಿ ಎಂಬ ಸದುದ್ದೇಶದೊಂದಿಗೆ ಸಂಪೂರ್ಣ ಹವಾನಿಯಂತ್ರಿತ ಎರಡು ಕೋಟಿ ರೂಪಾಯಿ ವೆಚ್ಚದ ಕಟ್ಟಡವನ್ನು ನಿರ್ಮಿಸಲಾಗಿದೆ. ಸುಮಾರು 94 ವರ್ಷಗಳಿಂದಲೂ ಈ ಭಾಗದ ಜನರಿಗೆ ಸೇವೆ ನೀಡುತ್ತಿರುವ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯವಾದುದು. ಸಿದ್ದಾಪುರದ ಬೆಲ್ಲ ಹೇಗೆ ಸಿಹಿಯೋ ಹಾಗೆಯೇ ಸಿದ್ದಾಪುರದ ಜನತೆಯೂ ಸಿಹಿ ಮನಸ್ಸಿನವರು. ಎರಡು ಕೋಟಿ ವೆಚ್ಚದಲ್ಲಿ ಹೊಸ ತಂತ್ರಜ್ಙಾನದೊಂದಿಗೆ ಕೃಷಿಕರಿಗೆ ಸೇವೆ ಕೊಡಲು ಮುಂದೆ ಬಂದಿದೆ ಎಂದರೆ ಅದಕ್ಕೆ ಸಿದ್ದಾಪುರದ ಸಿಹಿ ಮನಸ್ಸಿನ ಜನತೆ ಕಾರಣ ಎಂದರು.

ಸುಮಾರು 24 ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕೃಷಿಕರ ಸಾಲ ನೂರಕ್ಕೆ ನೂರರಷ್ಟು ವಸೂಲಾಗುತ್ತಿದೆ. ಇಡೀ ದೇಶದಲ್ಲೇ ನೂರಕ್ಕೆ ನೂರಷ್ಟು ರೈತರ ಸಾಲ ವಸೂಲಿಯಾಗುತ್ತಿರುವ ಜಿಲ್ಲೆ ಇದ್ದರೆ ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಂದರು.

ಬ್ಯಾಂಕಿಂಗ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಹಕಾರಿ ಕ್ಷೇತ್ರದಲ್ಲಿ ಐದು ಸಾವಿರ ರೂಪಾಯಿ ಡೆಪಾಸಿಟ್ ಹಣ ಇಡಲು ಹಿಂಜರಿಯುತ್ತಿದ್ದ ಕಾಲವೊಂದಿತ್ತು. ಆದರೆ ಇದೀಗ ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಜಾಗ ಖರೀದಿಸಿ ಸುಸಜ್ಜಿತವಾದ ಕಟ್ಟಡ ಕಟ್ಟಿ ಬೆಳಗ್ಗೆ ಸಾಲಕ್ಕೆ ಅರ್ಜಿ ನೀಡಿದರೆ ಸಂಜೆಯೊಳಗೆ ಸಾಲ ನೀಡುವ ಶಕ್ತಿ ಸಹಕಾರಿ ಕ್ಷೇತ್ರಕ್ಕೆ ಬಂದಿದೆ ಎಂದರು.

ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಐಪಿಎಸ್, ಬ್ಯಾಂಕಿನ ಭೌತಿಕ ಭದ್ರತೆಗಿಂತ ಬ್ಯಾಂಕ್‌ನ ಮೇಲೆ ನಂಬಿಕೆ ಇಟ್ಟರೆ ಅದಕ್ಕಿಂತ ಬೇರೆ ಭದ್ರತೆ ಬೇಕಿಲ್ಲ. ಬ್ಯಾಂಕ್ ಲಾಕರ್‌ನಲ್ಲಿಟ್ಟ ಹಣ, ಚಿನ್ನಾಭರಣ ಮುಖ್ಯವಲ್ಲ. ಅದರೊಳಗಿರುವ ಕನಸುಗಳು, ಆಸೆಗಳು, ವಿಶ್ವಾಸ ನಂಬಿಕೆ ಮುಖ್ಯ ಎಂದರು.

ಸಿದ್ದಾಪುರ ವ್ಯವಸಾಯ ಸೇವಾಸಹಕಾರಿ ಸಂಘದ ಅಧ್ಯಕ್ಷ ಎ. ಜಯರಾಮ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅದ್ಯಕ್ಷರಾದ ಕೊಡವೂರು ರವಿರಾಜ್ ಹೆಗ್ಡೆ, ಸಿದ್ದಾಪುರ ಜಿಲ್ಲಾ ಪಂಚಾಯತ್ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಸಿದ್ದಾಪುರ ತಾಲೂಕು ಪಂಚಾಯತ್ ಸದಸ್ಯ ವಾಸುದೇವ ಪೈ, ಹಳ್ಳಿಹೊಳೆ ತಾ.ಪಂ ಸದಸ್ಯೆ ಪೂರ್ಣಿಮಾ ನಾಯ್ಕ್, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಗಾಣಿಹೊಸಂಗಡಿ ಗ್ರಾ.ಪಂ ಅಧ್ಯಕ್ಷೆ ಯಶೋಧ ಶೆಟ್ಟಿ, ನಿರ್ದೇಶಕ ಗೋಪಾಲ ಕಾಮತ್,ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ, ಸಿಬ್ಬಂದಿ ಸದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *