Header Ads
Header Ads
Breaking News

‘ಸುಂಟರಗಾಳಿ’ಗೆ ವಸತಿನಿಲಯದಲ್ಲಿ ಅನಾಹುತ : 3 ವಿದ್ಯಾರ್ಥಿಗಳಿಗೆ ಗಾಯ

ಪುತ್ತೂರು: ಸೋಮವಾರ ರಾತ್ರಿ ಬೀಸಿದ ‘ಸುಂಟರಗಾಳಿ’ಯಿಂದಾಗಿ ಪುತ್ತೂರು ಬಲ್ನಾಡು ರಸ್ತೆಯ ಸಮೀಪದಲ್ಲಿರುವ ಉರ್ಲಾಂಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಸತಿನಿಲಯದ ಸಿಮೆಂಟ್ ಶೀಟ್ ಗಳು ಗಾಳಿಗೆ ಹಾರಿ ಮುರಿದುಬಿದ್ದು, ಮೂರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. 67 ವಿದ್ಯಾರ್ಥಿಗಳು ಯಾವುದೇ ಅಪಾಯವಾಗದೆ ಅದೃಷ್ಟವಶಾತ್ ಪಾರಾಗಿದ್ದಾರೆ.
ಗಾಯಗೊಂಡಿರುವ ಕೊಂಬೆಟ್ಟು ಪ್ರಥಮ ಪಿಯುಸಿ ವಿದ್ಯಾರ್ಥಿ ಮೂಲತಾ ಸಕಲೇಶಪುರದ ಮನೀಶ್ (16), ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪದವಿ ತರಗತಿ ವಿದ್ಯಾರ್ಥಿ ಮೂಲತಾ ಕೊಪ್ಪಳದ ಕನಕರಾಜ್ ( 19) ಮತ್ತು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿ ಮೂಲತಾ ಸಕಲೇಶಪುರದ ರಾಕೇಶ್ (18) ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರ ರಾತ್ರಿಯೇ ಭೇಟಿ ನೀಡಿದ ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಇತರ ಮಕ್ಕಳಿಗೆ ನಿವೃತ್ತ ಎಎಸೈ ಅವರ ಮನೆ ಮತ್ತು ಸುದಾನ ವಸತಿಯುತ ಶಾಲೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಈ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿದ್ದು, ಈ ಕಟ್ಟಡದ ಛಾವಣಿ ಸಂಪೂರ್ಣವಾಗಿ ಹಾರಿಹೋಗಿದ್ದು, ಗಾಳಿಯ ರಭಸಕ್ಕೆ ಸಿಮೆಂಟ್ ಶೀಟ್ ಗಳು 100 ಮೀಟರ್ ದೂರದಲ್ಲಿ ಬಿದ್ದಿದೆ. ಉದ್ಯಮಿಯೊಬ್ಬರ ಕಪಾಟು ತಯಾರಿಕೆ ನಡೆಸುವ ತಾಣವಾಗಿತ್ತು. ಕಳೆದ 6 ವರ್ಷಗಳಿಂದ ಇಲ್ಲಿ ವಸತಿ ನಿಲಯ ಪ್ರಾರಂಭ ಮಾಡಲಾಗಿತ್ತು. ಮಾಸಿಕವಾಗಿ ರೂ.70 ಸಾವಿರ ಬಾಡಿಗೆ ನೀಡಲಾಗುತ್ತಿತ್ತು.
ತಕ್ಷಣ ತಾತ್ಕಾಲಿಕ ಕ್ರಮ
ಗಾಯಾಳು ವಿದ್ಯಾರ್ಥಿಗಳನ್ನು ಮಂಗಳವಾರ ಭೇಟಿ ಮಾಡಿದ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ.ಆರ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರಸ್ತುತ ಈ ಮಕ್ಕಳಿಗೆ ತಾತ್ಕಾಲಿಕ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ವಸತಿನಿಲಯದಲ್ಲಿ ವ್ಯವಸ್ಥೆ ಮಾಡಲಾಗುವುದು. ಹಾರಾಡಿಯಲ್ಲಿರುವ ಮೋತಿಮಹಲ್ ಕಟ್ಟಡದಲ್ಲಿ ವಸತಿನಿಲಯ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ನಾಲ್ಕು ವಸತಿನಿಲಯಗಳಿಗೆ ಸ್ವಂತ ಕಟ್ಟಡದ ಅವಶ್ಯಕತೆ ಇದ್ದು, ಈಗಾಗಲೇ ನಿವೇಶನ ಮಂಜೂರಾಗಿದೆ ಎಂದ ಅವರು ಗಾಳಿಯಿಂದ ವಸತಿನಿಲಯಗಳ ವಿದ್ಯಾರ್ಥಿಗಳ ಬಟ್ಟೆ ಬರೆಗಳು ಸಂಪೂರ್ಣ ಹಾಳಾಗಿದ್ದು, ಸರ್ಕಾರಿ ವ್ಯವಸ್ಥೆಯಲ್ಲಿ ಬಟ್ಟೆಬರೆಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಅಧಿಕಾರದ ವ್ಯಾಪ್ತಿಗೆ ಬರುವ ಈ ವಸತಿನಿಲಯವನ್ನು ಹಾರಾಡಿ ರೈಲ್ವೇ ಸೇತುವೆ ಬಳಿಯ ಸುಧೀರ್ ಎಂಟರ್‍ಪ್ರೈಸಸ್ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುವುದು. ಕೊಂಬೆಟ್ಟು ಬ್ರಾಹ್ಮಣರ ವಸತಿನಿಯಕ್ಕಿಂತ ಹೆಚ್ಚು ಸೌಕರ್ಯ ಇಲ್ಲಿರುವ ಕಾರಣ ಈ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಸತಿನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಬಗ್ಗೆ ಈಗಾಗಲೇ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿದೆ. ಇಲಾಖಾ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ನೀಡಲಾಗಿದೆ. ಬನ್ನೂರಿನಲ್ಲಿ 20 ಸೆಂಟ್ಸ್ ಸ್ಥಳವನ್ನು ಗುರುತಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾ.ಪಂ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, , ಸಮಾಜಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ತಾರಾನಾಥ್, ವಿದ್ಯಾರ್ಥಿ ನಿಲಯ ಪಾಲಕ ಥೋಮಸ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *